ಮೈಸೂರು: ಬಸವಣ್ಣನವರು ಭಕ್ತಿ ಕಲ್ಯಾಣವನ್ನು ಕಟ್ಟಿದಂತೆ, ರಾಜೇಂದ್ರ ಶ್ರೀಗಳು ಭಕ್ತಿ ಕಲ್ಯಾಣಮಯವಾದ ಸಮಾಜವನ್ನು ಕಟ್ಟಿದರು. ಭಕ್ತಿಯಿಂದ ಸಾಧಿಸಲಾಗದೆ ಇರುವುದು ಯಾವುದೂ ಇಲ್ಲ ಎಂಬ ಅಚಲವಾದ ನಂಬಿಕೆಯಿಂದ ಲೋಕ ಕಲ್ಯಾಣದ ಕಾರ್ಯದಲ್ಲಿ ಪೂಜ್ಯರು ನಿರತರಾಗಿದ್ದರು. ಅವರ ಪ್ರತಿಯೊಂದು ಸಾಧನೆಯ ಹೆಜ್ಜೆಯಲ್ಲಿ ಭಕ್ತಿ ಎಂಬುದೇ ಪ್ರಧಾನವಾಗಿದೆ ಎಂದು ಪ್ರಾಧ್ಯಾಪಕ ಪ್ರೊ.ಎಚ್.ಬಿ. ದೇವಣ್ಣ ಹೇಳಿದರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 110ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೂಜ್ಯರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಗಮನಾರ್ಹವಾದುದು. ಜನರ ಶೈಕ್ಷಣಿಕ ಅಗತ್ಯವನ್ನು ಪೂರೈಸಲು ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿನಿಲಯ ಸ್ಥಾಪಿಸಿದರು.
ಸರಳತೆ, ಮಹಾಮಾನವತಾವಾದಿ ಗುಣ ಬಿಡದೆ ಪಾಲಿಸುತ್ತಾ ಬಂದ ಪೂಜ್ಯರು, ಲೌಕಿಕ ಮತ್ತು ಅಧ್ಯಾತ್ಮ ಬದುಕಿನಲ್ಲಿ ಆದರ್ಶವಿರಬೇಕು, ಪ್ರದರ್ಶನವಿರಬಾರದು ಎಂದು ನಡೆದು ತೋರಿಸಿದವರು ಎಂದು ಸ್ಮರಿಸಿದರು.
ಘನತೆ ಎಂಬುದು ಸ್ಥಾನದಿಂದ ಬರುವುದಿಲ್ಲ, ಅದು ನಾವು ಮಾಡುವ ಕಾರ್ಯದಿಂದ ಬರುವಂತಹದು ಎಂಬ ಅವರ ತತ್ವ ನಮಗೆಲ್ಲರಿಗೂ ಆದರ್ಶವಾಗಬೇಕು. ಮನುಷ್ಯ ಜ್ಞಾನವಂತನಾಗಬೇಕು. ಅರಿವು ಮೂಡಿಸಿಕೊಳ್ಳಬೇಕು ಎಂದು ಪೂಜ್ಯರು ಸದಾ ಬಯಸುತ್ತಿದ್ದರು. ಕಾಯಕ, ಜವಾಬ್ದಾರಿ ನಾವು ಸರಿಯಾಗಿ ನಿರ್ವಹಿಸುವುದೇ ಪೂಜ್ಯರಿಗೆ ನಾವು ಅರ್ಪಿಸುವ ಭಕ್ತಿಯ ಕೃತಜ್ಞತೆಯಾಗಿದೆ ಎಂದು ಹೇಳಿದರು.
ಬೆಟ್ಟದಪುರದ ಸಲಿಲಾಖ್ಯ ಮಠದ ಶ್ರೀ ಚೆನ್ನಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ರಾಜೇಂದ್ರ ಶ್ರೀಗಳಲ್ಲಿದ್ದ ಸಹನೆ, ಔದಾರ್ಯ ಮತ್ತು ತ್ಯಾಗ ಎಂಬ ಮೂರು ಮುಖ್ಯ ಗುಣಗಳು ಘನೀಕರಿಸಿದ್ದವು. ಈ ಗುಣಗಳಿಂದ ಅವರ ಆಧ್ಯಾತ್ಮಕ ಮತ್ತು ಸಾಮಾಜಿಕ ಸೇವೆ ನಡೆಯುತ್ತಿತ್ತು. ಇಂದು ನಾವೆಲ್ಲರೂ ಈ ಗುಣವನ್ನು ಬದುಕಿನುದ್ದಕ್ಕೂ ಅನುಸರಿಸಿಕೊಂಡು ಬದುಕಬೇಕು ಎಂದರು.
ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಶ್ರೀಗಳು ಹೊತ್ತಿಸಿದ ಅರಿವಿನ ಬೆಳಕಿನಲ್ಲಿ ಹಲವು ಕುಟುಂಬಗಳು ಸುಂದರವಾದ ಬದುಕನ್ನು ಕಂಡುಕೊಂಡಿವೆ. ಆ ಮೂಲಕ ಶ್ರೀಗಳವರು ಜನಮಾನಸದಲ್ಲಿ ಸದಾ ಹಸಿರಾಗಿದ್ದಾರೆ. ಅವರು ಅಕ್ಷರ, ಅನ್ನ, ಆರೋಗ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಅಕ್ಷರ ದಾಸೋಹಕ್ಕೆ ತಮ್ಮ ಇಡೀ ಬದುಕನ್ನೇ ಮುಡುಪಾಗಿಟ್ಟರು. ಶ್ರೀಗಳು ಬಡಜನರ ಬಗ್ಗೆ ಅಪಾರ ಕಳಕಳಿ ಹೊಂದಿದ್ದರು ಎಂದು ಹೇಳಿದರು.
ಶಿಕ್ಷಣದಿಂದ ನಾಡಿನ ಪ್ರಗತಿ ಸಾಧ್ಯ ಎಂದು ನಂಬಿದ್ದರು. ನಗರ ವಲಯದಲ್ಲಿ ಕೇಂದ್ರೀಕೃತವಾಗಿದ್ದ ಶಿಕ್ಷಣ ವ್ಯವಸ್ಥೆಯನ್ನು ಗ್ರಾಮೀಣ ವಲಯಕ್ಕೂ ವಿಸ್ತರಿಸಿದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಗರ ವಲಯಗಳಲ್ಲಿ ವಿದ್ಯಾರ್ಥಿನಿಲಯ ತೆರೆದರು. ಈ ಎಲ್ಲ ಬೆಳವಣಿಗೆಗಳ ಹಿಂದೆ ಪೂಜ್ಯರ ಅಂತಃಕರಣ ಮತ್ತು ದೂರದೃಷ್ಟಿ ಇದೆ ಎಂದರು.
ಸಮಾಜದ ಹಿತಕ್ಕಾಗಿ ಸದಾ ತುಡಿದ ಮಾತೃ ಹೃದಯವಿದೆ. ನಾವು ಪೂಜ್ಯರ ಆದರ್ಶ ನೆನೆದು ನಡೆಯಬೇಕಿದೆ.
ಉತ್ತಮ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ ಬೆಳೆೆಸಿಕೊಳ್ಳಬೇಕು. ನಾಡಿನ ಪ್ರಗತಿಗಾಗಿ ಶ್ರಮಿಸಬೇಕು. ರಾಜೆಂದ್ರಶ್ರೀಗಳು ನೆಟ್ಟ ಮರದ ಫಲ ನಾಡಿನ ಗಡಿ ದಾಟಿ ವಿಸ್ತರಿಸಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಯನ್ನು ವಿಸ್ತರಿಸುವ ಮೂಲಕ ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ಸೇವೆ ವಿಸ್ತರಿಸಿದರು.
ಅವರು ಸ್ಥಾಪಿಸಿದ ಎಲ್ಲ ಸಂಸ್ಥೆಗಳ ಜತೆಗೆ ಇನ್ನೂ ಹೆಚ್ಚಿನ ಸಂಸ್ಥೆಗಳು ಸ್ಥಾಪನೆಗೊಂಡು ಇಂದಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದರು.
ರಾಜೇಂದ್ರ ಶ್ರೀಗಳ ಜಯಂತಿ ಸ್ಮರಣಾರ್ಥ ನಡೆಸಿದ ಮೈಸೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪರೀಕ್ಷಾ ನಿಯಂತ್ರಣಾಧಿಕಾರಿಗಳಾದ ಡಾ. ಬಿ. ಪ್ರಭುಸ್ವಾಮಿ, ಪ್ರಾಂಶುಪಾಲ ಡಾ. ಎಂ. ಪ್ರಭು, ಡಾ.ಎನ್.ರಾಜೇಂದ್ರ ಪ್ರಸಾದ್ ಇನ್ನಿತರರಿದ್ದರು.
===================