ತಾಳಿಕೋಟೆ ಗಣೇಶ ಉತ್ಸವ ಹಾಗೂ ಈದ್ ಮಿಲಾದ್ ಹಬ್ಬ ಆಚರಣೆ ಕುರಿತು ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಮಾತನಾಡಿದರು. ಪಿಎಸ್‌ಐ ರಾಮನಗೌಡ ಸಂಕನಾಳ, ಉದಯಕುಮಾರ ಘಟಕಾಂಬಳೆ ಇತರರಿದ್ದರು. 
ಜಿಲ್ಲೆ

ಭಕ್ತಿಭಾವದಿಂದ ಗಣೇಶ ಉತ್ಸವ ಆಚರಿಸಿ

Vijayapura - Desk - Parashuram Keri

ತಾಳಿಕೋಟೆ: ಹಬ್ಬ ಹರಿದಿನಗಳು ಜಾತ್ರೆ ಉತ್ಸವಗಳು ಯಾವುದೇ ಒಂದು ಕೋಮಿಗೆ ಸೇರಿದವುಗಳಲ್ಲ. ಎಲ್ಲರೂ ಒಗ್ಗೂಡಿ ಆಚರಿಸಿಕೊಂಡು ಬರುವಂತಹ ಹಬ್ಬಗಳಾಗಿವೆ. ಅವುಗಳಲ್ಲಿ ಗಣೇಶೋತ್ಸವವೂ ಒಂದಾಗಿದೆ. ಗಣೇಶ ಉತ್ಸವವವನ್ನು ಭಕ್ತಿಭಾವದೊಂದಿಗೆ ಆಚರಿಸಿಕೊಂಡು ಬರಬೇಕು ಎಂದು ಮುದ್ದೇಬಿಹಾಳ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಹೇಳಿದರು.

ಮುಂಬರುವ ಗಣೇಶ ಉತ್ಸವ ಹಾಗೂ ಈದ್ ಮಿಲಾದ್ ಹಬ್ಬ ಆಚರಣೆ ಕುರಿತು ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣ ಈ ಹಿಂದೆ ಕೆಲವು ಘಟನೆಗಳಿಂದ ಕೆಂಪು ಚುಕ್ಕೆಯಲ್ಲಿ ಸೇರಿತ್ತು. ಈ ಕಾರಣದಿಂದಲೇ ಈ ಪಟ್ಟಣ ಕುರಿತು ನಾವು ಜಾಗೃತಿ ವಹಿಸಬೇಕಾಗಿದೆ. ಎಲ್ಲರೂ ಶಾಂತಿ ಪ್ರಿಯರಾಗಿದ್ದರೂ ಇಲಾಖೆಯ ಸಂಬಂಧಿತ ಕೆಲವು ಕಾನೂನುಗಳನ್ನು ತಮಗೆ ತಿಳಿಸಿ ಆ ರೀತಿ ನಡೆಯಬೇಕು ಎಂದು ಉತ್ಸವ ಸಮಿತಿಯವರಿಗೆ ಸೂಚಿಸಲಾಗುವುದು ಎಂದರು.

ಗಣೇಶ ಉತ್ಸವದಲ್ಲಿ ಡಿಜೆ ಹಚ್ಚುವ ವ್ಯವಸ್ಥೆಯಾಗಬಾರದು. ಇದಕ್ಕೆ ನ್ಯಾಯಾಲಯದ ಸೂಚನೆಯಿದೆ. ಧ್ವನಿವರ್ಧಕಗಳನ್ನು ಹಚ್ಚಿದರೂ ಶಬ್ದದ ಮಿತಿಯಂತೆ ಹಚ್ಚಬೇಕು. ಶ್ರದ್ಧೆ, ಭಕ್ತಿಪೂರ್ವಕವಾಗಿ ಗಣೇಶ ಉತ್ಸವವನ್ನು ಆಚರಿಸಿ ಎಂದರು.

ಪಿಎಸ್‌ಐ ರಾಮನಗೌಡ ಸಂಕನಾಳ ಮಾತನಾಡಿ, ಮೇಲಧಿಕಾರಿಗಳಿಂದ ಗಣೇಶ ಉತ್ಸವ ಕುರಿತು ನೀಡಿರುವ ಸೂಚನೆಗಳನ್ನು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ ಮಾತನಾಡಿ, ಪುರಸಭೆಯಿಂದ ಉತ್ಸವಕ್ಕೆ ಅನುಮತಿ ಇನ್ನಿತರ ವ್ಯವಸ್ಥೆ ಮಾಡಲಾಗುವುದು. ಗಣೇಶ ವಿಸರ್ಜನೆ ಸ್ಥಳವನ್ನು ಈ ಹಿಂದಿನಂತೆ ಡೋಣಿ ನದಿಯಲ್ಲಿ ಹೊಂಡದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.

ಸಾರ್ವಜನಿಕ ಗಣೇಶ ಉತ್ಸವ ಮಂಡಳಿಯ ಹಿರಿಯರಾದ ಕಾಶಿನಾಥ ಮುರಾಳ, ಹಿಂದು ಮಹಾ ಗಣಪತಿ ಮಹಾ ಮಂಡಳಿಯ ರಾಘವೇಂದ್ರ ವಿಜಾಪುರ, ಕುಮಾರಗೌಡ ಪಾಟೀಲ ಮಾತನಾಡಿ, ಹಿಂದಿನಿಂದಲೂ ಗಣೇಶ ಉತ್ಸವದಲ್ಲಿ ಯಾರಿಗೂ ಆತಂಕವಾಗದಂತೆ ಹಾಗೂ ಪೊಲೀಸ್ ಇಲಾಖೆ ನೀಡಿರುವ ಕಾನೂನಿನ ಅನ್ವಯದಂತೆ ನಾವು ನಡೆದುಕೊಳ್ಳುತ್ತೇವೆ. ಪೊಲೀಸ್ ಇಲಾಖೆಯ ಸಹಕಾರವು ಇರಲಿ ಎಂದರು.
ಎ.ಎಂ. ಪಟೇಲ, ಎಂ.ಎಸ್. ಸರಶೆಟ್ಟಿ, ವಿಜಯಸಿಂಗ್ ಹಜೇರಿ, ನೀಲಮ್ಮ ಪಾಟೀಲ, ಡಿ.ವಿ. ಪಾಟೀಲ, ಪರಶುರಾಮ ತಂಗಡಗಿ, ಸದ್ದಾಂ ಹೊನ್ನಳ್ಳಿ, ಮಂಜು ಶೆಟ್ಟಿ, ಎಸ್.ಎನ್. ಡಿಸಲೆ, ವಿಠ್ಠಲ ಮೋಹಿತೆ, ನಾಗರಾಜ ಪತ್ತಾರ, ಪ್ರವೀಣ ಕಿರಣಗಿ, ಜೈಭೀಮ ಮುತ್ತಗಿ, ನಿಸಾರ ಬೇಪಾರಿ, ಈಶ್ವರ ಹೂಗಾರ, ಅಬುಬಕರ ಲಾಹೋರಿ, ನಬಿರಸೂಲ ಲಾಹೋರಿ, ಇಮಾಮ ಕಾಳಗಿ, ಎಂ.ಎಚ್. ಕೆಂಭಾವಿ, ಇಬ್ರಾಹಿಂ ಮನ್ಸೂರ, ರಾಜು ಪವಾರ, ಶಂಕರ ಚವ್ಹಾಣ, ನೇಮೂ ರಾಠೋಡ, ವಿರೇಶ ಚವ್ಹಾಣ, ಪ್ರಶಾಂತ ಚವ್ಹಾಣ, ಶ್ರೀಧರ ಜಾಧವ, ಪ್ರಭುಗೌಡ ಬಿರಾದಾರ, ನಿಂಗನಗೌಡ ಪಾಟೀಲ, ಬಸವರಾಜ ನವಲೆ, ನಿಂಗಯ್ಯ ಹಿರೇಮಠ, ಕಾಶಿನಾಥ ಅರಳಿಚಂಡಿ ಇತರರಿದ್ದರು. ಮಹೇಶ ಚಲವಾದಿ ಸ್ವಾಗತಿಸಿ, ನಿರೂಪಿಸಿದರು.