ಕಲಾವಿದರಿಂದ ಶಿವಸ್ತುತಿ 
ಜಿಲ್ಲೆ

ಭಕ್ತಿಭಾವಗಳ ಶಿವ ನೃತ್ಯ ತಾಂಡವ, ಶಿವಸ್ತುತಿ, ಶಿವಭಜನೆ

ಬಾಗಲಕೋಟೆ: ಸಂಗೀತ ಶಿವರಾತ್ರಿ ಭಕ್ತಿಭಾವಗಳ ಶಿವ ನೃತ್ಯ ತಾಂಡವ ಹಾಗೂ ಶಿವ ಭಜನೆ, ಶಿವಸ್ತುತಿಗಳ ಮೂಲಕ ಭಕ್ತಾಧಿಗಳನ್ನು ಅನುರಂಜಿಸಿದವು. ಸರ್ವಂ ಸಂಗೀತ ಶಿವಮಯವಾಗಿತ್ತು.

ನಗರದ ಬಿ.ವಿ.ವಿ.ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಆವರಣದಲ್ಲಿರುವ ಶಿವಾಲಯದಲ್ಲಿ ಶಿವರಾತ್ರಿ ನಿಮಿತ್ಯ ಶುಕ್ರವಾರ ಸಂಜೆ ಸಂಗೀತ ಶಿವರಾತ್ರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಿತಾರ ನಿನಾದ, ವಚನ ಸಂಗೀತ, ಶಿವಸ್ತುತಿ, ಭಕ್ತಿ ಸಂಗೀತ, ಭಕ್ತಿ ಗೀತೆಗಳು ಮತ್ತು ನಾದ ವೈಭವವನ್ನು ಪ್ರಸ್ತುತ ಪಡಿಸಲಾಯಿತು.

ಕಾರ್ಯಕ್ರಮದ ಆರಂಭಕ್ಕೆ ಮೊದಲು ಮಾತನಾಡಿದ ಬಿ.ವಿ.ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಸಿ.ಚರಂತಿಮಠ ಅವರು ‘ದೇವರನ್ನು ಪ್ರಾರ್ಥಿಸುವ ವಿಧಾನಗಳಲ್ಲಿ ಸಂಗೀತಕ್ಕೆ ಪ್ರಥಮ ಆದ್ಯತೆ ಇದೆ. ಮಹಾಶಿವರಾತ್ರಿ ನಿಮಿತ್ಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಸಂಗೀತದ ವಿವಿಧ ಪ್ರಕಾರಗಳನ್ನು ಪ್ರಸ್ತುತಪಡಿಸಲಾಗುತ್ತಿದೆ. ನಗರದ ಸಾರ್ವಜನಿಕರು ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವರು. ಹಲವು ಗಂಟೆಗಳ ಕಾಲ ಭಕ್ತರು ಸಂಗೀತ ಸುಧೆಯಲ್ಲಿ ಮಿಂದೆಳಲಿರುವರು’ ಎಂದು ನುಡಿದರು.

ಡಾ.ಕಾಶಿಲಿಂಗ ಮಠ ಅವರ ಸಿತಾರ ನಾದದೊಂದಿಗೆ ಸಂಗೀತ ಶಿವರಾತ್ರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಡಾ.ದೊಡ್ಡಮನಿ ಅವರ ವಚನ ಸಂಗೀತ, ಕುಮಾರಿ ಅದಿತಿ ಅವರ ಭಕ್ತಿಗೀತೆಗಳು, ಪರಿಮಳಾ ಅವಧಾನಿ ಅವರ ಭಕ್ತಿಕುಸುಮಾಂಜಲಿ ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಅರ್ಪಿತಾ ಮತ್ತು ಬಸವಜ್ಯೋತಿ ಶಿವಸ್ತುತಿಯನ್ನು ಹಾಗೂ ಡಾ.ರಶ್ಮಿ ಚೌರ್ ಮತ್ತು ಡಾ.ಡಾ.ಹಿರಣ್ಮಯಿ ಬ್ರಿದ್ ಭರತನಾಟ್ಯವನ್ನು ಪ್ರಸ್ತುತ ಪಡಿಸಿದರು. ಪುಟ್ಟರಾಜ ಗವಾಯಿ ಸ್ಕೂಲ್ ಆಫ್ ಮ್ಯೂಜಿಕ್ ಅವರಿಂದ ಭಕ್ತಿಸಂಗೀತ ಸುಧೆ ಮತ್ತು ಇಂಜನಿಯರಿಂಗ್ ಕಾಲೇಜಿನ ತಂಡದಿAದ ಬಿ.ಇ.ಸಿ ಸ್ವರಗಳು ಮುಖ್ಯ ಆಕರ್ಷಣೆಯಾಗಿದ್ದವು. ಡಾ.ಸಿದ್ಧರಾಮಯ್ಯ ಮಠಪತಿ ಅವರ ನಾದ ವೈಭವದೊಂದಿಗೆ ಸಂಗೀತ ಶಿವರಾತ್ರಿ ಕಾರ್ಯಕ್ರಮ ಮುಕ್ತಾಯಗೊಂಡಿತು. ಡಾ.ಎಸ್.ಡಿ.ಕೆಂಗಲಗುತ್ತಿ ಕಾರ್ಯಕ್ರಮವನ್ನು ನಿರೂಪಿಸಿದರು. ಈಶ್ವರನ ದರ್ಶನಕ್ಕೆ ಮತ್ತು ಸಂಗೀತ ಶಿವರಾತ್ರಿ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.

ಸಂಗೀತ ಶಿವರಾತ್ರಿ ಕಾರ್ಯಕ್ರಮದಲ್ಲಿ ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿಗಳಾದ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಅಶೋಕ ಸಜ್ಜನ (ಬೇವೂರ), ಬಿ.ವಿ.ವಿ ಸಂಘದ ಗೌರವಾನ್ವಿತ ಸದಸ್ಯರು, ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ, ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ, ಎಲ್ಲ ಆರೋಗ್ಯ ಮಹಾವಿದ್ಯಾಲಯಗಳ ಸಿಬ್ಬಂದಿ ಮತ್ತು ನಗರದ ಸಾರ್ವಜನಿಕರು ಉಪಸ್ಥಿತರಿದ್ದರು.