ಚಿಕ್ಕಮಗಳೂರು: ನಮ್ಮ ಹಿಂದೂ ಸಂಸ್ಕÈತಿಯಲ್ಲಿ ಪ್ರಾರ್ಥನೆಗಳು, ಭಜನೆಗಳು, ಗೀತೆಗಳೆಲ್ಲವೂ ಪ್ರಧಾನ ಪಾತ್ರ ವಹಿಸುತ್ತವೆ. ಭಕ್ತಿಗೀತೆಗಳಂತೂ ಸನಾತನ ಧರ್ಮದ ರಕ್ಷಾ ಕವಚಗಳಂತಿವೆ ಎಂದು ಲೇಖಕ, ಚಿಂತಕ ಕೆಂಪನಹಳ್ಳಿ ಚಂದ್ರಶೇಖರ್ ತಿಳಿಸಿದರು.
ನಗರದ ಬಸವನಹಳ್ಳಿ ಕುಂಬಾರ ಬೀದಿಯಲ್ಲಿರುವ ಶ್ರೀವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಕಲ್ಕಟ್ಟೆ ಪುಸ್ತಕದ ಮನೆ, ಅಖಿಲ ಭಾರತ ಸಾಹಿತ್ಯ ಪರಿಷತ್, ಶ್ರೀಗುರುಕೃಪಾ ಸಂಗೀತ ಸೇವಾ ಟ್ರಸ್ಟ್ ಆಯೋಜಿಸಿದ್ದ ಕಲ್ಕಟ್ಟೆ ಗಾನ ದೀವಿಗೆ ಸರಣಿಯ ೨೮ನೇ ಗೀತೆ ಕುಂಬಾರ ಬೀದಿಯ ಶ್ರೀವೀರಭದ್ರ ಸ್ವಾಮಿ ಹಾಡು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಎಚ್.ಎನ್.ಮಲ್ಲೇಶರಾವ್ ಅವರ ಸ್ಮರಣೆಯಲ್ಲಿ ನಿಜಕ್ಕೂ ಕಲ್ಕಟ್ಟೆ ಬಳಗ ಉತ್ತಮ ಧಾರ್ಮಿಕ ಸೇವೆ ನಡೆಸುತ್ತಿದೆ. ಭಾರತದ ನೆಲದಲ್ಲಿನ ಮೂಲ ಧರ್ಮದ ಉಳಿವಲ್ಲಿ ಸಂಗೀತದ ಪಾತ್ರ ಬಹುಮುಖ್ಯ ಎಂದರು.
ಸಾಹಿತಿ ರಮೇಶ್ ಬೊಂಗಾಳೆ ಮಾತನಾಡಿ, ಈ ಕಾಲದಲ್ಲಿ ಸಂಜೆ ಪಾರ್ಟಿಗೆ ಬನ್ನಿ, ಕ್ಲಬ್‌ಗೆ ಬನ್ನಿ, ಬಾರ್‌ಗೆ ಬನ್ನಿ ಎಂದು ಸಂಜೆ ಹೊತ್ತಲ್ಲಿ ಕರೆಯುವವರು ಜಾಸ್ತಿಯಾಗುತ್ತಿದ್ದಾರೆ. ಆದರೆ ನಾಗರಾಜರಾವ್ ಕಲ್ಕಟ್ಟೆ ಅವರು ನಮ್ಮನ್ನೆಲ್ಲ ದೇವಸ್ಥಾನಕ್ಕೆ ಬನ್ನಿ ಎಂದು ಕರೆಯುತ್ತಿರುವುದು ನಿಜಕ್ಕೂ ಗೌರವದ ವಿಷಯ. ಕೆ.ಎನ್.ನಾಗಭೂಷಣ್ ಈ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಅವರೂ ಸ್ತುತ್ಯಾರ್ಹರು ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯೆ ಚಾಂದಿನಿ ಚಮಕ್ ಮಾತನಾಡಿ, ಕಲ್ಕಟ್ಟೆ ನಾಗರಾಜರಾವ್ ಅವರ ಭಕ್ತಿಗೀತೆಗಳನ್ನು ಕನ್ನಡ ನಾಡಿನ ಎಲ್ಲ ಭಜನಾ ತಂಡಗಳೂ ಹಾಡಬೇಕು. ಈ ಸರಣಿಯ ನಿರ್ಮಾಪಕಿಯಾಗಿರುವ ರೇಖಾ ನಾಗರಾಜರಾವ್ ಈ ದಿಸೆಯಲ್ಲಿ ಮುಂದೆ ತರಬೇತಿ ಶಿಬಿರ ನಡೆಸಬೇಕು ಎಂದರು.
ಹಂಸಧ್ವನಿ ರಾಗದ `ವೀರಭದ್ರ ಗೀತೆಯನ್ನು ವೈಷ್ಣವಿ ಎನ್.ರಾವ್ ಸಂಗೀತ ಸಹಕಾರದಲ್ಲಿ ಮೂಡಿ ಬಂದು ಜನಮೆಚ್ಚುಗೆ ಪಡೆಯಿತು. ಚುಟುಕು ಕವಿ ಅರವಿಂದ ದೀಕ್ಷಿತ್, ಒಕ್ಕಲಿಗ ಮಹಿಳಾ ಮಂಡಳಿಯ ಕನಕ ಶಂಕರ್, ನಾಗಭೂಷಣ್ ಕೆ.ಎನ್., ಗಾಯತ್ರಿ ನಾಗಭೂಷಣ್, ಅರ್ಚಕರಾದ ರೇಣುಕಾ ಮೂರ್ತಿ, ಪಾಕತಜ್ಞ ಬಾಟಾ ನಾಗೇಂದ್ರ, ಪಾಕ ಚತುರೆ ಮೀರಾ ನಾಗೇಂದ್ರ, ಲೋಕೇಗೌಡ, ಶಿಕ್ಷಕಿ ವೇದಾ ಅಶೋಕ್, ಕೆಂಪನಹಳ್ಳಿ ನವೀನ್ ಮತ್ತಿತರರಿದ್ದರು.