ಜಿಲ್ಲೆ

ಭಕ್ತಿ ಮಾರ್ಗ ಪಾಲಿಸಿದರೆ ದೈವತ್ವ ಅನುಗ್ರಹ ನಿಶ್ಚಿತ

ಲೋಕೇಶ್ ಮನು. ಡಿ

ಅರಕಲಗೂಡು: ಎಲ್ಲರೂ ಸಂಸ್ಕಾರವಂತರಾಗಿ ಗುರು ಹಿರಿಯರು ಸಾಗಿದ ಭಕ್ತಿ ಮಾರ್ಗ ಪಾಲಿಸಿದರೆ ದೈವತ್ವದ ಅನುಗ್ರಹ ಪಡೆಯಬಹುದು ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್.ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.


ತಾಲೂಕಿನ ದೇವೀಪುರ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ರೀ ಕಾಳಿಕಾಂಬ ಚೌಡೇಶ್ವರಿ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಪೂರ್ವವಿಕರ ಕಾಲದಲ್ಲಿ ಇದ್ದ ಭಕ್ತಿ, ದೈವ ನಂಬಿಕೆ ಪ್ರಸ್ತುತ ಕಡಿಮೆಯಾಗುತ್ತಿದ್ದು, ಜನರ ನಡುವಿನ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ. ಹಳೆಯ ದೇವಸ್ಥಾನಗಳನ್ನು ಅವನತಿ ಹೊಂದಲು ಬಿಡದೆ ಜೀರ್ಣೋದ್ಧಾರ ಮಾಡಬೇಕು. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ನಾಂದಿಯಾಗಲಿದೆ ಎಂದರು.


ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಕೆ.ಆರ್.ನಗರ ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ದೇವರನ್ನು ಕಾಣಬೇಕಾದರೆ ಕಾಯಕ ಜೀವಿಯಾಗಬೇಕು. ಜೀವನದಲ್ಲಿ ಸತ್ಯ, ಪ್ರಾಮಾಣಿಕತೆ, ನ್ಯಾಯ, ಧರ್ಮ ಮಾರ್ಗದಲ್ಲಿ ನಡೆದರೆ ದೈವ ಸಾಕ್ಷಾತ್ಕಾರ ಪಡೆದುಕೊಳ್ಳಬಹುದು. ಜೀವನದಲ್ಲಿ ನೆಮ್ಮದಿ ಶಾಂತಿ ಕಂಡುಕೊಳ್ಳಬಹುದು ಎಂದು ನುಡಿದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಮುಖಂಡರಾದ ಮುತ್ತಿಗೆ ರಮೇಶ್, ಕಳ್ಳಿಮುದ್ದನಹಳ್ಳಿ ಲೋಕೇಶ್, ವಸಂತಕುಮಾರ್, ದೊಡ್ಡೇಗೌಡ, ರೇವಣ್ಣ, ಮಂಜು, ಶ್ರೀ ರಾಜೇಗೌಡ, ರಂಗೇಗೌಡ, ದಿವಾಕರಗೌಡ ಇತರರಿದ್ದರು.