ನೆಲಮಂಗಲ: ನಗರದ ವೀವರ್ಸ್ ಕಾಲನಿಯ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಮತ್ತು ಶಮಿಗಿರಿ ಕ್ಷೇತ್ರವೆಂದೇ ಪ್ರಸಿದ್ಧವಾಗಿರುವ ಬಸವನಹಳ್ಳಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇಗುಲಗಳಲ್ಲಿ ವೈಕುಂಠ ಏಕಾದಶಿ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಗುರುವಾರ ಬೆಳಗಿನ ಜಾವದಿಂದಲೇ ದೇವಾಲಯಕ್ಕೆ ಭೇಟಿ ನೀಡಿದ ಸಹಸ್ರಾರು ಭಕ್ತರು ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ಗೋವಿಂದನ ನಾಮಸ್ಮರಣೆಯಲ್ಲಿ ಮಿಂದೆದ್ದರು. ಬೆಳಗ್ಗೆ 4 ಗಂಟೆಯಿಂದ ರಾತ್ರಿವರೆಗೂ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ವಿವಿಧ ಧಾರ್ಮಿಕ ಕಾರ್ಯಕ್ರಮ: ಈ ಪ್ರಯುಕ್ತ ದೇವಾಲಯಗಳಲ್ಲಿನ ಮಹಾಗಣಪತಿ, ವೈನತೇಯ ಸಮೇತ ಶ್ರೀ ಲಕ್ಷ್ಮೀ ವೆಂಕಟೇಶ್ವರ, ಲಕ್ಷ್ಮೀ ವೆಂಕರಮಣ ಸೇರಿ ಎಲ್ಲ ದೇವರ ಮೂರ್ತಿಗಳಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಪ್ರಬಾತ ಸೇವೆ, ಧೂಪ ದೀಪ, ಚಾಮರ, ವ್ಯಂಜನ ಸೇವೆ ಅಭಿಷೇಕಗಳಂತಹ ವಿಶೇಷ ಪೂಜಾವಿಧಿಗಳನ್ನು ನೆರವೇರಿಸಲಾಯಿತು.
ವೈಕುಂಠ ದ್ವಾರ: ಏಕಾದಶಿ ದಿನ ವೈಕುಂಠದ ಉತ್ತರ ದ್ವಾರದಿಂದ ಪ್ರವೇಶಿಸುವ ಸಕಲ ದೇವಾನುದೇವತೆಗಳು ಶ್ರೀ ಮಹಾಲಕ್ಷ್ಮೀ ಸಮೇತ ಶ್ರೀಮನ್ನಾರಾಯಣ ಸ್ವಾಮಿಯ ದರ್ಶನ ಪಡೆಯುತ್ತಾರೆ. ಅದರಂತೆ ವೀವರ್ಸ್ ಕಾಲನಿ, ಬಸವನಹಳ್ಳಿಯ 2 ದೇಗುಲಗಳಲ್ಲೂ ಪ್ರವೇಶ ದ್ವಾರದ ಉತ್ತರ ದಿಕ್ಕಿನಲ್ಲಿ ಸಪ್ತ ವೈಕುಂಠ ದ್ವಾರ ನಿರ್ಮಿಸಲಾಗಿತ್ತು. ದೇಗುಲಗಳಲ್ಲಿ ಪ್ರಮುಖ ದೇವರ ದರ್ಶನ ಪಡೆದ ಭಕ್ತರು ಶ್ರೀ ದೇವಿ ಭೂದೇವಿ ಸಮೇತ ಶ್ರೀ ಲಕ್ಷ್ಮೀ ವೆಂಕಟರಮಣನ ದೇವರನ್ನು ತೂಗುವ ಉಯ್ಯಲೆಯಲ್ಲಿ ಇಡಕಾಗಿತ್ತು. ಭಕ್ತರು ಅದರ ಕೆಳಭಾಗದಲ್ಲಿ ಹಾದು ಹೋಗಲು ವ್ಯವಸ್ಥೆ ಮಾಡಲಾಗಿತ್ತು.
ಗ್ರಾಪಂ ಮಾಜಿ ಉಪಾಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ, ಸದಸ್ಯ ಉಮೇಶ್‌ಗೌಡ, ನೆಮ್ಮದಿ ಸಂಸ್ಥೆ ಅಧ್ಯಕ್ಷ ಎಚ್. ರಾಮುಜೋಗಿಹಳ್ಳಿ, ಕರವೇ ಕನ್ನಡಿಗರ ಧ್ವನಿ ಸಂಘಟನೆ ಅಧ್ಯಕ್ಷ ಮಲ್ಲೇಶ್, ಮುಖಂಡ ಕಿರಣ್‌ಕುಮಾರ್, ಪ್ರಧಾನ ಅರ್ಚಕ ನಾರಾಯಣ್‌ಭಟ್, ಅರ್ಚಕರಾದ ಗರುಡಾಚಾರ್ಯ, ಶ್ರೀನಿವಾಸ್‌ಚಾರ್ಯ, ಶ್ರೀನಿವಾಸ್ ಮತ್ತಿತರರು ಇದ್ದರು.
ಹನುಮ ದೇಗುಲಗಳಲ್ಲೂ ವಿಶೇಷ ಪೂಜೆ: ತಾಲೂಕಿನ ಐತಿಹಾಸಿಕ ಬೈರಶೆಟ್ಟಿಹಳ್ಳಿ ಮತ್ತು ಚನ್ನಪ್ಪ ಬಡಾವಣೆಯ ಹನುಮನ ದೇವಾಲಯಗಳಲ್ಲೂ ವೈಕುಂಠ ಏಕಾದಶಿ ಆಚರಿಸಲಾಯಿತು. ಚನ್ನಪ್ಪ ಬಡಾವಣೆಯ ಶ್ರೀ ಆಂಜನೇಯ ದೇವರಿಗೆ ಮಾಡಿದ್ದ ಹೂವಿನ ಅಲಂಕಾರ ವಿಶೇಷವಾಗಿತ್ತು.
ಪರಸ್ಪರ ಅಂತರ ಮರೆತರು: ವೈಕುಂಠ ಏಕಾದಶಿಯ ಪ್ರಯುಕ್ತ ದೇವಾಲಯಗಳಿಗೆ ಬಂದಿದ್ದ ಭಕ್ತರು ಮಾಸ್ಕ್ ಧರಿಸಿದ್ದರು. ಆದರೆ, ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ಪರಸ್ಪರ ಅಂತರ ಕಾಯ್ದುಕೊಳ್ಳುವುದನ್ನು ಮರೆತಿದ್ದರು.