ಜಿಲ್ಲೆ

ಭಕ್ತರಹಳ್ಳಿ ಅರಸೀಕೆರೆ ಕೆರೆ ಕೊಡಿ ವಾಲ್ವ ಜಖಂ, ಚಿಂತಾಮಣಿಗೆ ನೀರು ಪೂರೈಕೆ ವಿರೋಧಿಸಿ ಕೃತ್ಯದ ಶಂಕೆ

ಚಿಂತಾಮಣಿ : ನಗರಕ್ಕೆ ಕುಡಿಯುವ ನೀರು ಪೂರೈಕೆಯ ಭಕ್ತರಹಳ್ಳಿ ಕೆರೆಯ ಕೋಡಿ ಸಮೀಪದ ಸಿಮೆಂಟ್ ವಾಲ್ವ್ ಅನ್ನು ಎರಡನೇ ಬಾರಿಗೆ ದುಷ್ಕರ್ಮಿಗಳು ಕಿತ್ತಿದ್ದು, ಗ್ರಾಮಾಂತರ ಠಾಣೆಯಲ್ಲಿ ಪೌರಾಯುಕ್ತ ಹರೀಶ್ ದೂರು ದಾಖಲಿಸಿದ್ದಾರೆ.

ಭಕ್ತರಹಳ್ಳಿ ಕೆರೆಯಿಂದ ಕುಡಿಯುವ ನೀರು ನಗರಕ್ಕೆ ಪೂರೈಸಲು ಯೋಜನೆ ರೂಪಿಸಿ, ಕಾಮಗಾರಿ ಕೈಗೊಳ್ಳಲಾಗುತ್ತಿದೆ, ಮತ್ತೊಂದೆಡೆ ಕೆರೆಯ ಸುತ್ತಲಿನ ಗ್ರಾಮಗಳಿಗೆ ನೀರು ಪೂರೈಸುವಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದ್ದು ಇದರ ನಡುವೆ ಜುಲೈ 25ರಂದು ಕೋಡಿ ಕಟ್ಟೆಯ ಸಿಮೆಂಟ್ ವಾಲ್ವ್ ಜಖಂಗೊಳಿಸಲಾಗಿತ್ತು.

ಇದೀಗ ಮತ್ತೆ ದುಷ್ಕರ್ಮಿಗಳು ಸಿಮೆಂಟ್ ವಾಲ್ವ್ ಕಿತ್ತಿದ್ದು ನೀರು ಪೋಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೌರಾಯುಕ್ತ ಹರೀಶ್ ಮತ್ತು ತಾಂತ್ರಿಕ ಶಾಖಾಧಿಕಾರಿ ಪದ್ಮನಾಭರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನೀರು ಹರಿದು ಹೋಗದಿಂತೆ ತಾತ್ಕಾಲಿಕ ಕಾಮಗಾರಿ ನಡೆಸಲು ಕ್ರಮಕೈಗೊಂಡಿದ್ದಾರೆ.

ಠಾಣೆಯಲ್ಲಿ ದೂರು ದಾಖಲು : ಸರ್ಕಾರದ ಆದೇಶದಂತೆ ನಗರಸಭೆ ನಿರ್ವಹಿಸುತ್ತಿರುವ ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಕೆಲ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ, ಗಲಾಟೆ ಮಾಡುತ್ತಿದ್ದಾರೆ. ಇದರ ನಡುವೆ ವಾಲ್ವ್ ಕಿತ್ತಿದ್ದಾರೆ, ಯೋಜನೆಗೆ ಅಡ್ಡಿಪಡಿಸುವ ಹುನ್ನಾರವಿದ್ದು ಮುಂಬರುವ ದಿನಗಳಲ್ಲೂ ಜಖಂಗೊಳಿಸುವ ಸಾಧ್ಯತೆ ಇರುವುದರಿಂದ ತನಿಖೆ ಕೈಗೊಂಡು ಕಿಡಿಗೇಡಿಗಳನ್ನು ಬಂಧಿಸುವಂತೆ ಪೌರಾಯುಕ್ತರು ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ.

ನಷ್ಟದ ಬಗ್ಗೆ ವರದಿ : ಸಿಮೆಂಟ್ ವಾಲ್ವ್ ಕಿತ್ತು ಹಾಕಿರುವುದರಿಂದ ಮತ್ತೊಮ್ಮೆ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಪ್ರಸ್ತುತ ನಷ್ಟವಾಗಿರುವುದರ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಜಖಂಗೊಂಡಿರುವುದನ್ನು ತ್ವರಿತವಾಗಿ ಸರಿಪಡಿಸಲಾಗುವುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ.