ಜಿಲ್ಲೆ

ಭಕ್ತರನ್ನು ಸಲಹುವ ವಿಜಯಕಾಳಿ

ಪಾಂಡವಪುರ: ನಿಷ್ಕಲ್ಮಶ ಮನಸ್ಸಿನ ಪ್ರಾರ್ಥನೆಯೊಂದಿಗೆ ಹರಕೆ ಹೊತ್ತರೆ ಸೂರ್ಯನೆದುರು ಮಂಜು ಕರುಗುವಂತೆ ಕಷ್ಟಗಳನ್ನು ಕರಗಿಸಿ ಬಾಳಿನಲ್ಲಿ ಸುಖ, ಶಾಂತಿ, ನೆಮ್ಮದಿ ಕರುಣಿಸುತ್ತಾ ಕರುಣಾಮಯಿಯಾಗಿ ಭಕ್ತರನ್ನು ಸಲಹುತ್ತಿದ್ದಾಳೆ ವಿಜಯಕಾಳಿ.


ಪಾಂಡವಪುರ ಪಟ್ಟಣದಿಂದ ಕೆ.ಆರ್.ಪೇಟೆ ಮಾರ್ಗವಾಗಿ ಸಂಚರಿಸಿದರೆ 6 ಕಿ.ಮೀ. ಅಂತರದಲ್ಲಿ ಕೆ.ಬೆಟ್ಟಹಳ್ಳಿ-ಹುಲ್ಕೆರೆ ಕೊಪ್ಪಲು ಗ್ರಾಮಗಳ ನಡುವೆ ತಾಯಿ ವಿಜಯಕಾಳಿ ನೆಲೆ ನಿಂತಿದ್ದಾಳೆ. ದೇವಸ್ಥಾನದ ಪ್ರಧಾನರಾಗಿರುವ ರಾಜೇಶ್ವರ್ ಗುರೂಜಿ ಮನೆತನದವರು ನಾಲ್ಕು ತಲೆಮಾರಿನಿಂದ ಪೂಜಿಸಲ್ಪಡುತ್ತಿರುವ ವಿಜಯಕಾಳಿ ಈ ಸ್ಥಳದಲ್ಲಿ ನೆಲೆ ನಿಂತಿರುವುದೇ ವಿಸ್ಮಯ.


16 ವರ್ಷಗಳ ಹಿಂದೆ ರಾಜೇಶ್ವರ್ ಗುರೂಜಿ ಅಜ್ಞಾತವಾಸದಲ್ಲಿದ್ದಾಗ ಸಂತರೊಬ್ಬರು ಪ್ರತ್ಯಕ್ಷರಾಗಿ ನೀನು ಕಾಳಿದೇವಿಯ ಆರಾಧಕನಾಗು. ನಿನಗೆ ದೇವಿಯ ಅನುಗ್ರಹವಾಗುತ್ತದೆ ಎಂದು ಆಶೀರ್ವಾದ ಮಾಡಿದರಂತೆ. ಅಲ್ಲಿಂದ ಹಿಂದಿರುಗಿ ಬಂದು ದೇವಿಯ ಆರಾಧನೆಯಲ್ಲಿ ತೊಡಗಿದ ಗುರೂಜಿಗಳಿಗೆ ದೇವಿಯ ಪ್ರೇರಣೆಯಂತೆ ದೇವಸ್ಥಾನ ನಿರ್ಮಾಣ ಕಾಮಗಾರಿಗಾಗಿ ಭೂಮಿ ಅಗೆಯುವಾಗ ಕಾಳಿಕಾದೇವಿ

ಯ ರೌದ್ರಾವತಾರದ ವಿಗ್ರಹ ದೊರೆತಿದೆ. ಅಂದಿನಿಂದಲೂ ಕಾಳಿಕಾದೇವಿ ವಿಜಯಕಾಳಿಯಾಗಿ ಇಲ್ಲಿ ಪೂಜಿಸಲ್ಪಡುತ್ತಿದ್ದಾಳೆ.
ಪಾಂಡವಪುರ ತಾಲೂಕು ಮಾತ್ರವಲ್ಲದೆ, ರಾಜ್ಯದ ವಿವಿಧ ಮೂಲೆಗಳಿಂದ ಹಾಗೂ ಹೊರ ರಾಜ್ಯದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೆ ಇಟ್ಟು, ಬಳಿಕ ತಮ್ಮ ಶಕ್ತಿಗನುಸಾರವಾಗಿ ಹರಕೆ ಸಲ್ಲಿಸುತ್ತಾರೆ. ಸೀರೆ, ತಾಳಿ ಹರಕೆ ಹೊತ್ತರೆ ದೇವಿ ಪ್ರಸನ್ನಳಾಗಿ ಭಕ್ತರ ಆಶೋತ್ತರ ಈಡೇರಿಸುತ್ತ್ತಾಳೆ ಎಂಬುದು ದೇವಿಯ ಆರಾಧಕರ ನಂಬಿಕೆ.


ಸಮಸ್ಯೆಗಳಿಗೆ ಪರಿಹಾರ: ಸಂತಾನ, ವ್ಯಾಪಾರ ನಷ್ಟ, ಸಂಸಾರ ವ್ಯಾಧಿ, ಕೌಟುಂಬಿಕ ಕಲಹ, ಗೃಹ ನಿರ್ಮಾಣ, ಮಾಟ-ಮಂತ್ರ ತೊಂದರೆ, ಭೂತಪಿಶಾಚಿಗಳ ಕಾಟ, ವಿವಾಹ, ಹಣಕಾಸು ತೊಂದರೆ ಇತ್ಯಾದಿಗಳ ಬಾಧೆಗೆ ಒಳಗಾಗಿ ನೆಮ್ಮದಿ ಕಳೆದುಕೊಂಡು ಜೀವನದಲ್ಲಿ ಬೇಸತ್ತಿರುವ ಭಕ್ತರು ಒಮ್ಮೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರೆ, ಎಲ್ಲ ದುಃಖ-ದುಮ್ಮಾನಗಳು ದೂರವಾಗುತ್ತದೆ ಎಂಬುದು ಇಲ್ಲಿಗೆ ಆಗಮಿಸುವ ಅಪಾರ ಭಕ್ತರ ವಿಶ್ವಾಸದ ನುಡಿ.

ಅಮಾವಾಸ್ಯೆ, ಹುಣ್ಣಿಮೆಗೆ ವಿಶೇಷ ಪೂಜೆ: ಮಂಗಳವಾರ, ಶುಕ್ರವಾರ, ಭಾನುವಾರ ಹಾಗೂ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ದೇವಿ ಹೆಚ್ಚು ರೌದ್ರಳಾಗುತ್ತಾಳಂತೆ. ಹೀಗಾಗಿ ಈ ದಿನಗಳಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿ ತಿಂಗಳು ಬರುವ ಹುಣ್ಣಿಮೆ ಮತ್ತು ಅಮಾವಸ್ಯೆ ದಿನದಂದು ದೇವಿಗೆ ಪ್ರತ್ಯಂಗಿರಾ ಹೋಮ ನಡೆಸಲಾಗುವುದು. ಇದರಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಈ ಹೋಮದಿಂದ ಶತ್ರು ಸಂಹಾರ, ವಾಮಾಚಾರ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಮನೆಯಿಂದ ಮೂರು ಹಿಡಿ ಉಪ್ಪು, ಒಣಮೆಣಸಿನಕಾಯಿ ತಂದು ಹೋಮಕ್ಕೆ ಅರ್ಪಿಸಿದರೆ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಎಂಬ ನಂಬಿಕೆಯೂ ಭಕ್ತರಲ್ಲಿ ಬಲವಾದ ನಂಬಿಕೆ.

ಪವಾಡ ಬಸವನ ಮಹಿಮೆ: ದೇವಸ್ಥಾನದಲ್ಲಿ ಪವಾಡಕ್ಕೆ ಹೆಸರಾದ ವಿಜಯಕಾಳಿ ಬಸಪ್ಪ ಇದ್ದು, ತನ್ನನ್ನು ನಂಬಿದ ಭಕ್ತರ ಒಳಿತಿಗಾಗಿ ಬಸಪ್ಪ ಪ್ರತಿದಿನ ಅನೇಕ ಪವಾಡ ಮಾಡುತ್ತದೆ ಎಂಬ ನಂಬಿಕೆಗಳು ಭಕ್ತರಲ್ಲಿ ಮನೆ ಮಾಡಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಪವಾಡ ಬಸಪ್ಪನಿಂದ ಆಶೀರ್ವಾದ ಪಡೆಯದೆ ಹಿಂದಿರುಗುವುದಿಲ್ಲ.


ದೇವಸ್ಥಾನದಲ್ಲಿ ದೇವಿಗೆ ಪೂಜೆ ಸಲ್ಲಿಕೆಯಾದ ಬಳಿಕ ಭಕ್ತರು ಬಸಪ್ಪನ ಬಳಿ ಆಶೀರ್ವಾದ ಪಡೆಯಲು ಸಾಲುಗಟ್ಟಿ ನಿಲ್ಲುತ್ತಾರೆ. ಭಕ್ತರು ತಮ್ಮ ಮನಸ್ಸಿನಲ್ಲಿ ಅಂದುಕೊಂಡಿರುವ ಕೆಲಸ ಕಾರ್ಯಗಳು ನೆರವೇರುತ್ತದೆಯೋ? ಇಲ್ಲವೋ? ಎಂದು ಬಸಪ್ಪನ ಪಾದದ ಬಳಿ ಕುಳಿತುಕೊಂಡು ಬೇಡಿಕೊಳ್ಳುತ್ತಾರೆ. ಬೇಡಿಕೆ ಈಡೇರುತ್ತದೆ ಎನ್ನುವುದಾದರೆ ಬಸಪ್ಪ ಬಲಗಾಲನ್ನು ಭಕ್ತರ ಅಂಗೈ ಮೇಲೆ ಇಟ್ಟು ಆಶೀರ್ವಾದ ಮಾಡುತ್ತದೆ. ಇಲ್ಲವಾದರೆ ನಿರಾಕರಿಸುತ್ತದೆ.
ಸಾಕಷ್ಟು ಭಕ್ತರು ತಮ್ಮ ಅನೇಕ ಕೆಲಸ ಕಾರ್ಯಗಳ ಸಿದ್ಧಿಗಾಗಿ ಬಸವನ ಆಶೀರ್ವಾದ ಪಡೆದೇ ಮುಂದಿನ ಕೆಲಸಕ್ಕೆ ಕೈಹಾಕುತ್ತಾರೆ. ಜತೆಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಭ ಕಾರ್ಯದ ವೇಳೆ ಬಸವನನ್ನು ಕರೆದುಕೊಂಡು ಹೋಗಿ ಪಾದಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರೆ ಆ ಕೆಲಸ ನಿರ್ವಿಘ್ನ ಎನ್ನುವುದು ವಾಡಿಕೆ.