ಹುಮನಾಬಾದ್: ಬೇಡಿದ ವರವ ನೀಡುವ ದುಷ್ಟರ ಸಂಹಾರಕ ಶ್ರೀ ವೀರಭದ್ರೇಶ್ವರ ದೇವರು ಈ ಭೂಮಿಯಲ್ಲಿ ನೆಲೆಸಿ ಭಕ್ತರನ್ನು ರಕ್ಷಿಸುತ್ತಿದ್ದಾರೆ ಎಂದು ಮಾಣಿಕನಗರ ಸಂಸ್ಥಾನ ಪೀಠಾಧಿಪತಿ ಶ್ರೀ ಡಾ.ಜ್ಞಾನರಾಜ ಪ್ರಭುಗಳು ನುಡಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಜಯಸಿಂಹನಗರ ಸ್ಥಾಪನೆಯ ಮೂನ್ನೂರನೇ ವರ್ಷಾಚರಣೆ ಸಂಭ್ರಮ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನ ಇಂದ್ರಿಯಗಳು ಹತೋಟಿಯಲ್ಲಿದ್ದಾಗ ಮಾತ್ರ ಅಹಂಕಾರ ಶಮನಕ್ಕೆ ಸಾಧ್ಯ. ಇದರಿಂದ ಏಕಾಗ್ರತೆ ಹೆಚ್ಚಿಸುತ್ತದೆ. ಶ್ರೀ ವೀರಭದ್ರೇಶ್ವರ ದೇವರ ಧ್ಯಾನ ಮಾಡಿದಾಗ ಮಾತ್ರ ನಮಗೆ ದೇವರ ಶಕ್ತಿಯು ಅಂತರ್ಗತವಾಗಿರುತ್ತದೆ. ನಮ್ಮ ಪ್ರತಿಯೊಂದು ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ ಎಂದು ಹೇಳಿದರು.
ಈ ಹಿಂದೆ ಶ್ರೀ ಮಾಣಿಕಪ್ರಭುಗಳು ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದಾಗ ಅವರಿಗೆ ಸಾಕ್ಷಾತ್ಕಾರ ಆದ ಬಳಿಕ ಶ್ರೀ ಮಾಣಿಕಪ್ರಭುಗಳು ಇದೆ ನೆಲೆಯಲ್ಲಿ ನೆಲೆಸಿದಾರೆ. ಇದರಿಂದ ಅನಾಧಿ ಕಾಲಗಳಿಂದ ಶ್ರೀ ವೀರಭದ್ರೇಶ್ವರ ದೇವಸ್ಥಾನದೊಂದಿಗೆ ಮಾಣಿಕನಗರದ ಶ್ರೀ ಮಾಣಿಕಪ್ರಭುಗಳ ಅನ್ಯೋನ್ಯ ಸಂಬಂಧಗಳು ಇವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ಹಿರೇಮಠ ಸಂಸ್ಥಾನದ ಶ್ರೀ ರೇಣುಕ ವೀರ ಗಂಗಾಧರ ಶಿವಾಚಾರ್ಯರು ಮಾತನಾಡಿ, ಇಂದಿನ ಈ ಕಾರ್ಯಕ್ರಮ ಐತಿಹಾಸಿಕ ಹಾಗೂ ಅಜರಾಮರವಾಗಿದೆ. ಇದೇ ರೀತಿ ಪ್ರತಿವರ್ಷ ಸಂಕ್ರಮಣದಂದು ಶ್ರೀ ವೀರಭದ್ರೇಶ್ವರ ದೇವರಿಗೆ ಸೇವೆ ಸಲ್ಲಿಸುವಂತೆ ತಿಳಿಸಿದರು.
ಶ್ರೀ ಮಾಣಿಕಪ್ರಭು ಸಂಸ್ಥಾನ ಕಾರ್ಯದರ್ಶಿ ಆನಂದರಾಜ ಪ್ರಭು ಮಾತನಾಡಿದರು. ಸಹಕಾರ್ಯದರ್ಶಿ ಚೈತನ್ಯಪ್ರಭು ಆರತಿ ನಡೆಸಿಕೊಟ್ಟರು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರಣ್ಣ ಪಾಟೀಲ್, ಮಾಜಿ ಸಚಿವ ರಾಜಶೇಖರ ಪಾಟೀಲ್, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಮಲ್ಲಿಕಾರ್ಜುನ ಮಾಳಶಟ್ಟಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಬಸವರಾಜ ಆರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಮಲ್ಲಿಕಾರ್ಜುನ ಮಾಳಶೆಟ್ಟಿ, ಮಹೇಶ ಅಗಡಿ, ಸೋಮಶೇಖರ ಬುಳ್ಳಾ, ದತ್ತಕುಮಾರ ಚಿದ್ರಿ, ಉದ್ಯಮಿಗಳಾದ ಸಂತೋಷ ಪಾಟೀಲ್, ವೆಂಕಟೇಶ ಕುಲ್ಕರ್ಣಿ ಇತರರಿದ್ದರು.