ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಹುಣಸೇಕೊಪ್ಪಲು ಗ್ರಾಮ ಹೊರವಲಯದ ಗಂಗಾಮಾತೆಯ ದಡದಲ್ಲಿ ನೆಲೆಸಿರುವ ಶ್ರೀ ಪ್ಲೇಗಿನಮ್ಮ ತಾಯಿ ಭಕ್ತರ ಪಾಲಿನ ಮಹಾಶಕ್ತಿಯಾಗಿದ್ದಾಳೆ.
ಹುಣಸೇಕೊಪ್ಪಲು ಗ್ರಾಮದಿಂದ ಚಪ್ಪರದಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ಜೀರ್ಣೋದ್ಧಾರಗೊಂಡ ಗುಡಿಯಲ್ಲಿ ಶ್ರೀ ಪ್ಲೇಗಿನಮ್ಮ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ತಲೆ ತಲಾಂತರಗಳಿಂದ ಈ ದೇವಿಯು ಭಕ್ತರ ಭರವಸೆಯಾಗಿ ನೆಲೆಸಿದ್ದಾಳೆ.
ಗ್ರಾಮದ ಕಲ್ಯಾಣ, ಮಳೆ, ಮನೆಯಲ್ಲಿನ ನಾನಾ ಸಮಸ್ಯೆಗಳಿಂದ ಮುಕ್ತಿ ಹೊಂದಲು, ಉದ್ಯೋಗ, ಮದುವೆ, ಸಂತಾನ ಸೇರಿದಂತೆ ನಾನಾ ಸಮಸ್ಯೆ ಹಾಗೂ ಒಳ್ಳೆಯ ಕಾರ್ಯಗಳಿಗೆ ಈ ಭಾಗದ ಜನರು ದೇವಿ ಬಳಿ ಹರಕೆ ಕಟ್ಟಿಕೊಳ್ಳುವುದು ಈ ಕ್ಷೇತ್ರದ ವಿಶೇಷ. ಅಲ್ಲದೆ, ಅಂದುಕೊಂಡಂತೆ ಬೇಡಿಕೆ ಈಡೇರಿದರೆ, ಬಳಿಕ ದೇವಿಗೆ ಹರಕೆ ತಿರಿಸುವುದು ಇಲ್ಲಿನ ವಾಡಿಕೆಯಾಗಿದೆ.
ದೇವಸ್ಥಾನ ಕಾಯುವ ದೇವರ ಸರ್ಪ: ಗ್ರಾಮದ ಮಹಾಶಕ್ತಿಯಾಗಿರುವ ಶ್ರೀ ಪ್ಲೇಗಿನಮ್ಮ ದೇವಸ್ಥಾನದ ಬಳಿ ಹಾವು ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುವುದು ಹಾಗೂ ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆಗಳ ಸಂದರ್ಭದಲ್ಲಿಯೂ ಹೊರಾವರಣದಲ್ಲಿ ಹರಿದಾಡುವುದು ಈ ಕ್ಷೇತ್ರದ ಮತ್ತೊಂದು ಮಹಿಮೆ. ನೂತನ ದೇವಸ್ಥಾನದ ಜೀರ್ಣ್ಣೋದ್ಧಾರ ಸಂದರ್ಭದಲ್ಲಿ ದೇವರ ಗುಡಿಯಲ್ಲಿಯೇ ಈ ಹಾವು ಗೂಡು ಕಟ್ಟಿತ್ತು. ಹಾಗಾಗಿ ಇದನ್ನು ಇಲ್ಲಿನ ಭಕ್ತರು ದೇವರ ಹಾವು ಎಂದು ಕರೆಯುವ ಮೂಲಕ ಅದನ್ನು ಆರಾಧಿಸುತ್ತಾರೆ. ಹಲವಾರು ಬಾರಿ ದೇವಸ್ಥಾನದ ಗುಡಿಯೊಳಗೆ ಹಾವು ಇರುವುದನ್ನು ನಾನು ನೋಡಿದ್ದೇನೆ. ಆದರೆ ಈವರೆಗೂ ಅದರಿಂದ ಯಾರಿಗೂ ಸಮಸ್ಯೆ ಊಂಟಾಗಿಲ್ಲ. ಇದು ಗುಡಿ ಕಾಯುವ ದೇವರ ಸರ್ಪ ಎನ್ನುತ್ತಾರೆ ದೇವಸ್ಥಾನದ ಅರ್ಚಕರು.
ದೇವಸ್ಥಾನದ ಹಿನ್ನೆಲೆ: ಸುಮಾರು ವರ್ಷಗಳ ಹಿಂದೆ ದೇವರು ಗ್ರಾಮದ ಒಳಭಾಗದಲ್ಲಿ ಗುಡಿಯೊಂದರಲ್ಲಿ ಇತ್ತು. ಹೀಗಾಗಿ ದೇವರು ಇದೇ ಜಾಗದಲ್ಲಿ ನೆಲೆಸಬೇಕು ಎಂಬ ಕಾರಣಕ್ಕಾಗಿ ಅಂದು ಗುಡಿ ನಿರ್ಮಾಣ ಮಾಡಲಾಯಿತು. ಅದಲ್ಲದೆ ಪ್ಲೇಗ್ ಎಂಬ ರೋಗ ಅಂದಿನ ಕಾಲದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಲವಡೆಯಿಂದ ಬರುತ್ತಿದ್ದ ಭಕ್ತರು ದೇವಿಯನ್ನು ಆರಾಧಿಸಲು ಪ್ರಾರಂಭಿಸಿದರು ಎಂದು ಹೇಳುತ್ತಾರೆ ಸ್ಥಳೀಯರು.
ವಿಶೇಷ ಪೂಜೆಗಳಿಂದ ಆರಾಧನೆ
ಈ ಭಾಗದ ಭಕ್ತರಲ್ಲಿ ಅಪಾರ ನಂಬಿಕೆ ಸೃಷ್ಟಿ ಮಾಡಿರುವ ಪ್ಲೇಗಿನಮ್ಮ ದೇವಿಯನ್ನು ವಿಶೇಷವಾಗಿ ಆರಾಧಿಸಲಾಗುವುದು. ಹರಕೆ ಕಟ್ಟಿಕೊಂಡು ಅದು ಈಡೇರಿದ ಬಳಿಕ ಭಕ್ತರು ಸಸ್ಯಾಹಾರ ಹಾಗೂ ಮಾಂಸಾಹಾರ ರೂಪದಲ್ಲಿ ಹರಕೆ ಸಲ್ಲಿಸುತ್ತಾರೆ. ಇದಲ್ಲದೆ ಸಂಕ್ರಾಂತಿ, ಶಿವರಾತ್ರಿ, ಯುಗಾದಿ, ಗಣೇಶ ಚರ್ತುಥಿ, ದೀಪಾವಳಿಯಂತಹ ಹಬ್ಬಗಳ ಸಂದರ್ಭದಲ್ಲಿಯೂ ಸ್ಥಳೀಯ ಭಕ್ತರು ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸುವುದು ವಾಡಿಕೆ.
ಹಿಂದಿನ ಕಾಲದಲ್ಲಿ ಗ್ರಾಮದ ಪೂರ್ವಜರು ಒಂದು ವರ್ಷ ವಾನ್ಯಪೂಜೆ ಮತ್ತು ಒಂದು ವರ್ಷ ವಿಶೇಷ ಪೂಜೆ ಸಲ್ಲಿಸುತ್ತಿದ್ದ ಬಗ್ಗೆ ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ. ನೋಡುವುದಕ್ಕೆ ಕಡಿಮೆ ಜನಸಂಖ್ಯೆ ಇರುವ ಪುಟ್ಟ ಗ್ರಾಮವಾದರೂ ಹಲವು ಜಿಲ್ಲೆಗಳಿಂದ ಭಕ್ತರು ಇಲ್ಲಿಗೆ ಆಗಮಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ.
2022ರ ನವೆಂಬರ್‌ನಲ್ಲಿ ದೇವಸ್ಥಾನ ಸಮಿತಿ ಹಾಗೂ ಭಕ್ತರ ಸಹಕಾರದಿಂದ ನೂತನ ದೇವಸ್ಥಾನ ಉದ್ಘಾಟನೆ ಹಾಗೂ ಪ್ಲೇಗಿನಮ್ಮ ದೇವಿಯ ಪ್ರತಿಷ್ಠಾಪನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ದೇವಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಪೂರ್ಣಕುಂಭ ಹಾಗೂ ವಾದ್ಯದೊಂದಿಗೆ ಮೆರವಣಿಗೆ ಮಾಡಲಾಗಿತ್ತು. ದೇವಸ್ಥಾನದಲ್ಲಿ ಗಂಗಾಪೂಜೆ, ದೇವಕಾಯ ಪ್ರವೇಶ, ಗಣಪತಿ ಹೋಮ, ಸಂದಿತ ಕಾಲ ಹೋಮ ಸೇರಿದಂತೆ ಅನೇಕ ಪೂಜಾ ಕೈಂಕರ್ಯ ನೆರವೇರಿತು. ಈ ವೇಳೆ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದಿದ್ದರು.
ಗುಡಿಗೆ ತಲುಪುವ ಮಾರ್ಗ: ದೇವಸ್ಥಾನದ ಬಳಿ ಉತ್ತಮ ಆವರಣವಿದ್ದು, ಶುಭ ಕಾರ್ಯಕ್ರಮ ಮಾಡಲು ಅನುಕೂಲಕರವಾಗಿದೆ. ಪಿರಿಯಾಪಟ್ಟಣ ತಾಲೂಕು ಕೇಂದ್ರದಿಂದ ಬೆಟ್ಟದಪುರದಿಂದ ಹಲಗನಹಳ್ಳಿ ಮಾರ್ಗವಾಗಿ ರಾಜನಬಿಳಗೂಲಿ ಗ್ರಾಮಕ್ಕೆ ಹೋಗುವ ಮುನ್ನ ಸಿಗುವ ಹುಣಸೇಕೊಪ್ಪಲು ಗೇಟ್ ಮೂಲಕ ತಲುಪಬಹುದು. ಇಲ್ಲವಾದರೆ ಬೆಟ್ಟದಪುರದಿಂದ ಚಪ್ಪರದಹಳ್ಳಿ ಗ್ರಾಮದ ಮಾರ್ಗವಾಗಿಯೂ ಈ ಗ್ರಾಮಕ್ಕೆ ಭೇಟಿ ನೀಡಬಹುದು. ತಾಲೂಕು ಕೇಂದ್ರದಿಂದ ಸುಮಾರು 25 ಕೀ.ಮೀ ಕ್ರಮಿಸಬೇಕು. ಹೆಚ್ಚಿನ ಮಾಹಿತಿಗೆ ದೇವಸ್ಥಾನದ ಆರ್ಚಕ ನಿಂಗರಾಜೇಗೌಡ ಮೊ.7760897928 ಸಂಪರ್ಕಿಸಬಹುದು.
ಪ್ಲೇಗಿನಮ್ಮ ತಾಯಿ ದರ್ಶನಕ್ಕೆ ಹೊರ ಜಿಲ್ಲೆಗಳಿಂದಲೂ ಭಕ್ತರು ಬರುತ್ತಾರೆ. ಇತ್ತೀಚೆಗೆ ಅಚ್ಚುಕಟ್ಟಾದ ದೇವಸ್ಥಾನ ನಿರ್ಮಾಣವಾಗಿದೆ. ಇದು ಭಕ್ತರಲ್ಲಿ ಇನ್ನಷ್ಟು ಸಂತಸವನ್ನುಂಟು ಮಾಡಿದೆ. ಹರಕೆ ಸಲ್ಲಿಸುವ ಭಕ್ತರಿಗೆ ದೇವಿಯು ಅನುಗ್ರಹ ನೀಡುವುದರಿಂದ, ಅಪಾರ ನಂಬಿಕೆ ಇಟ್ಟು ಶ್ರದ್ಧೆ-ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ.
ನಿಂಗರಾಜೇಗೌಡ ದೇವಸ್ಥಾನದ ಅಚರ್ಕ