ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಧರೆಗೆದೊಡ್ಡವರು ಮಂಟೇಸ್ವಾಮಿ ಮಠದಲ್ಲಿ ಮಳವಳ್ಳಿ, ಹೊನ್ನನಾಯಕನಹಳ್ಳಿ ಹಾಗೂ ಕಪ್ಪಡಿ ಕ್ಷೇತ್ರದ ಪೀಠಾಧಿಪತಿ ಶ್ರೀಕಂಠಸಿದ್ದಲಿಂಗರಾಜೇ ಅರಸು ಅವರ 42ನೇ ಜನ್ಮದಿನವನ್ನು ಗ್ರಾಮಸ್ಥರು ಸೇರಿದಂತೆ ನೀಲಗಾರ ಪರಂಪರೆಯ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಶ್ರೀಗಳು ದಂಪತಿ ಸಮೇತರಾಗಿ ಗ್ರಾಮಕ್ಕೆ ಪ್ರವೇಶಿಸಿದಾಗ ಆರತಿ ಬೆಳಗಿ ಮಠದ ಸಂಪ್ರದಾಯದಂತೆ ಪರಿಚಾರಕರು ಛತ್ರಿ ಚಾಮರವನ್ನಿಡಿದು ತಮಟೆ, ನಗಾರಿ, ಕೊಂಬು, ಕಹಳೆಗಳಿಂದ ಸ್ವಾಗತಿಸುವುದರ ಜತೆಗೆ, ಮೆರವಣಿಗೆ ಮೂಲಕ ಮಠಕ್ಕೆ ಕರೆತರಲಾಯಿತು. ನಂತರ ಸಿದ್ಧಪಡಿಸಿದ್ದ ವೇದಿಕೆಯಲ್ಲಿ ಶ್ರೀಕಂಠಸಿದ್ದಲಿಂಗರಾಜೇ ಅರಸು ಅವರಿಗೆ ನೆರೆದ ಭಕ್ತಸಮೂಹ ಪುಷ್ಪಾರ್ಚನೆ ಮಾಡಿ ಜನ್ಮದಿನದ ಶುಭ ಕೋರಿದರು.
ಗೌರವ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಶ್ರೀಮಠದ ಗೌರವಕ್ಕೆ ಹಾಗೂ ನೀಲಗಾರ ಪರಂಪರೆಗೆ ಇರುವ ಭಕ್ತರ ಭಾವನೆಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ನಮ್ಮ ಕುಟುಂಬ ನಡೆದುಕೊಂಡು ಬರುತ್ತಿದೆ. ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಾ ಜನರ ಒಳಿತಿಗಾಗಿ ಕೈಗೊಳ್ಳುವ ಕೆಲಸಕ್ಕೆ ಪ್ರೇರಣೆಯಾಗಿರುವ ಹಿರಿಯರಿಗೆ ಕೃತಜ್ಞನಾಗಿರುವೆ ಎಂದರು.
ಬಿ.ಜಿ.ಪುರ ಮಂಟೇಸ್ವಾಮಿ ಮಠದ ಪೀಠಾಧ್ಯಕ್ಷ ಜ್ಞಾನಾನಂದ ಚನ್ನರಾಜೇ ಅರಸು ಮಾತನಾಡಿ, ಮಠದ ಕ್ಷೇತ್ರಗಳ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಶ್ರೀಕಂಠಸಿದ್ದಲಿಂಗರಾಜೇ ಅರಸು ಅವರು ಮುಂದಿನ ಪೀಳಿಗೆಗೂ ಶ್ರೀಮಠದ ಪರಂಪರೆಯನ್ನು ಕೊಂಡೋಯ್ಯಲು ಹಲವು ಯೋಜನೆಗಳನ್ನು ರೂಪಿಸಿಕೊಂಡು ಬರುತ್ತಿದ್ದಾರೆ. ನೂರುಕಾಲ ಇವರು ಆರೋಗ್ಯಕರ ಜೀವನ ನಡೆಸುವ ಮೂಲಕ ಮಠಕ್ಕೆ ಅವರ ಸೇವೆ ನಿರಂತರವಾಗಿರಲೆಂದು ಶುಭಕೋರಿದರು.
ಶ್ರೀಮಠದ ಭಕ್ತ ಕಲಾವಿದನೊಬ್ಬ ಶ್ರೀಗಳ ಭಾವಚಿತ್ರವನ್ನು ಬಿಡಿಸಿ ಕೊಡುಗೆ ನೀಡಿದರು. ಅತಿ ಹೆಚ್ಚು ಅಂಕ ಪಡೆದ ಗ್ರಾಮದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸರಗೂರು ಹೊಸಮಠದ ಬಸವರಾಜೇಂದ್ರ ಸ್ವಾಮೀಜಿ, ಶ್ರೀಮಠದ ಧರ್ಮಾಧಿಕಾರಿಗಳಾದ ಸಂಜಯ್ ವೀರರಾಜೇ ಅರಸು, ಚೇತನ್ ಸಿದ್ದಲಿಂಗ ರಾಜೇಅರಸು, ವರುಣ್ ಸಿದ್ದಲಿಂಗರಾಜೇಅರಸು, ಗ್ರಾಮದ ಯಜಮಾನರು, ಮುಖಂಡರು, ವಿವಿಧೆಡೆಗಳಿಂದ ಆಗಮಿಸಿದ್ದ ಸಹ್ರಸ್ರಾರು ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.