ಹುಮನಾಬಾದ್: ಐತಿಹಾಸಿಕ ಹಿನ್ನೆಲೆಯುಳ್ಳ ಸೀಮಿ ನಾಗನಾಥ ದೇವಸ್ಥಾನವು ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಕೇಂದ್ರವಾಗಿದೆ ಎಂದು ಜಹೀರಾಬಾದ್ ತಾಲೂಕಿನ ಮಲ್ಲಯ್ಯ ಗಿರಿ ಮತ್ತು ದೇಗಲಮಡಿ ಆಶ್ರಮದ ಪೀಠಾಧಿಪತಿ ಶ್ರೀ ಬಸವಲಿಂಗ ಅವಧೂತರು ನುಡಿದರು.
ಹಳ್ಳಿಖೇಡ (ಬಿ) ಪಟ್ಟಣದ ಸೀಮಿ ನಾಗನಾಥ ದೇವಸ್ಥಾನದಲ್ಲಿ ಶನಿವಾರ ಶ್ರಾವಣ ಪ್ರಯುಕ್ತ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಶ್ರದ್ಧಾ, ಭಕ್ತಿಯಿಂದ ಸೀಮೆ ನಾಗಣ್ಣನಿಗೆ ಪೂಜೆ ಸಲ್ಲಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಎದುರಾಗುವ ಸಂಕಷ್ಟಗಳು ದೂರವಾಗಿ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದರು.
ಧಾಮರ್ಿಕ ಕಾರ್ಯಕ್ರಮಗಳಿಂದ ವ್ಯಕ್ತಿಯಲ್ಲಿ ಸಂಸ್ಕಾರ ಬೆಳೆಯುತ್ತದೆ. ಹೀಗಾಗಿ ಇವು ನಿರಂತರವಾಗಿ ನಡೆಯಬೇಕು. ಇದರಿಂದ ನಮ್ಮ ಸಂಸ್ಕೃತಿ, ಪರಂಪರೆ ಬೆಳೆಯುತ್ತದೆ ಎಂದು ತಿಳಿಸಿದರು.
ಸಮಾಜದಲ್ಲಿನ ಎಲ್ಲರೂ ಪ್ರೀತಿ, ವಿಶ್ವಾಸದಿಂದ ಬದುಕುವುದನ್ನು ಕಲಿಯಬೇಕು. ಪ್ರತಿಯೊಬ್ಬರೂ ಸತ್ಯ ಹಾಗೂ ಅಹಿಂಸೆಯ ಮಾರ್ಗದಲ್ಲಿ ಸಾಗಬೇಕು. ಮನಸ್ಸು ಚಂಚಲಮಯ. ಈ ಮನಸ್ಸಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಸನ್ಮಾರ್ಗದಲ್ಲಿ ಸಾಗುತ್ತದೆ ಎಂದು ಹೇಳಿದರು.
ಹಳ್ಳಿಖೇಡ ಚಿಕ್ಕಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರತಿಯೊಬ್ಬರೂ ಸತ್ಸಂಗದಲ್ಲಿ ಬದುಕಬೇಕು. ಒಳ್ಳೆಯ ಜೀವನ ಸಾಗಿಸಿ ಎಂದು ನುಡಿದರು.
ಅರ್ಚಕ ಸಂತೋಷ ಹಾಲಾ, ನಾಗೇಶ್ವರ, ಗಣೇಶ ಘನತೆ, ನೆಹರು ಮಾಳಗಿ, ರಾಘವೇಂದ್ರ ಪಾಂಚಾಳ, ಮನೋಹರ ಚಳಕೆ, ದಯಾನಂದ ಭಂಡಾರಿ, ನಾಗೇಶ್ವರ ಯೂತ್ ಕ್ಲಬ್ ಅಧ್ಯಕ್ಷ ಗುರುರಾಜ ಗೌಡನಗುರು ಇತರರಿದ್ದರು.