ಬೀದರ್: ಬರುವ 23ರಿಂದ ಶುರುವಾಗಲಿರುವ ನರ್ಸಿಂಗ್ ಕೋಸ್೯ಗಳಾದ ಎಂಎಸ್ಸಿ, ಬಿಎಸ್ಸಿ, ಜಿಎನ್ಎಂ ಪರೀಕ್ಷೆಯನ್ನು ಆಯಾ ಸಂಸ್ಥೆಯವರ ಕಾಲೇಜು ಕೇಂದ್ರದ ಬದಲಾಗಿ ಸಾಮೂಹಿಕವಾಗಿ ಇಲ್ಲಿನ ಬ್ರಿಮ್ಸ್ ಕಾಲೇಜಿನಲ್ಲಿ ನಡೆಸಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ಆಗ್ರಹಿಸಿದೆ.
ಸಮಿತಿ ಜಿಲ್ಲಾ ಸಂಚಾಲಕ ಉಮೇಶಕುಮಾರ ಸ್ವಾರಳ್ಳಿಕರ್, ಸಂಘಟನಾ ಸಂಚಾಲಕ ನರಸಿಂಗ ಸಾಮ್ರಾಟ, ವಿದ್ಯಾರ್ಥಿ ಒಕ್ಕೂಟ ಜಿಲ್ಲಾ ಸಂಚಾಲಕ ಸಂದೀಪ ಕಾಂಟೆ, ಪ್ರಮುಖರಾದ ಪ್ರಶಾಂತ ಸಾದನೂರ, ವಿಜಯಕುಮಾರ ಸಾಮ್ರಾಟ, ಖಂಡಪ್ಪಾ ಪಾತರಪಳ್ಳಿ ಅವರುಳ್ಳ ನಿಯೋಗ ಸೋಮವಾರ ಡಿಸಿ ರಾಮಚಂದ್ರನ್ ಅವರಿಗೆ ಭೇಟಿಯಾಗಿ ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ಬರೆದ ಮನವಿಪತ್ರ ಸಲ್ಲಿಸಿ, ನರ್ಸಿಂಗ್ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಸೇರಿ ನಾನಾ ಅಕ್ರಮ ನಡೆಸುವುದು ಸಾಮಾನ್ಯವಾಗಿದೆ. ಇದಕ್ಕೆ ಕಡಿವಾಣ ಹಾಕಿ ಪಾರದರ್ಶಕ ಪ್ರಕ್ರಿಯೆಗಾಗಿ ಬ್ರಿಮ್ಸ್ ನಲ್ಲಿ ಪರೀಕ್ಷೆ ನಡೆಸಿ, ಜಿಲ್ಲಾಡಳಿತ ಉಸ್ತುವಾರಿ ವಹಿಸುವಂತೆ ಕೋರಿದರು.
ಇಲ್ಲಿನ ಬಹುತೇಕ ನರ್ಸಿಂಗ್ ಕಾಲೇಜು ಮುಖ್ಯಸ್ಥರು ಪ್ರಭಾವಿಗಳಿದ್ದು, ವಿವಿಧ ರಾಜಕೀಯ ಪಕ್ಷಗಳ ಜತೆ ಗುರುತಿಸಿಕೊಂಡಿದ್ದಾರೆ. ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳಿಂದ ಬೇಕಾಬಿಟ್ಟಿ ಹಣ ಪಡೆದು, ಅಡ್ಡ ಹಾದಿಯಿಂದ ವೃತ್ತಿಪರ ಕೋಸ್೯ನಲ್ಲಿ ಉತ್ತೀರ್ಣ ಮಾಡಿಕೊಡುವ ದಂಧೆಯಲ್ಲಿ ತೊಡಗಿದ್ದಾರೆ. ಪ್ರತಿ ಸಲ ಪರೀಕ್ಷಾ ಅಕ್ರಮದ ದೂರು ಬರುತ್ತಿವೆ. ಈ ಹಿಂದೆ ರಾತ್ರಿ ಹೊತ್ತಿನಲ್ಲಿ ಪರೀಕ್ಷೆ ಬರೆಸುತ್ತಿದ್ದ ಪ್ರಕರಣ ಸ್ವತಃ ಡಿಸಿ ಅವರು ನಡೆಸಿದ ಕಾರ್ಯಾಚರಣೆಯಲ್ಲಿಯೇ ಪತ್ತೆಯಾಗಿತ್ತು. ಈಗ ಮತ್ತೆ ಅಕ್ರಮ ನಡೆಸಿ, ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ದೂರಿದ್ದಾರೆ.
ನರ್ಸಿಂಗ್ ಪರೀಕ್ಷೆಯನ್ನು ಬ್ರಿಮ್ಸ್ ನಲ್ಲೇ ನಡೆಸಿ ಅಕ್ರಮಕ್ಕೆ ಬ್ರೇಕ್ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು. ಬೇಡಿಕೆಗೆ ಕಡೆಗಣಿಸಿದರೆ ಆಯಾ ನರ್ಸಿಂಗ್ ಕಾಲೇಜು ಕೇಂದ್ರಗಳ ಎದುರು ಪರೀಕ್ಷಾ ದಿನದಂದು ಪ್ರತಿಭಟನೆ ನಡೆಸಲಾಗುವುದು.| ಉಮೇಶಕುಮಾರ ಸ್ವಾರಳ್ಳಿಕರ್ದಸಂಸ ಜಿಲ್ಲಾ ಸಂಚಾಲಕ