ಚಿತ್ರದುರ್ಗ: ಬ್ರಿಟಿಷರ ಆಡಳಿತಾವಧಿಯಲ್ಲಿ ಚಿತ್ರದುರ್ಗ ವಿಭಾಗದ ಕಮಿಷನರ್ ಆಗಿದ್ದ ಆರ್.ಎಸ್. ಡಾಬ್ಸ್ ಅವರು ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಇತಿಹಾಸ ಸಂಶೋಧಕ ಪ್ರೊ. ಲಕ್ಷಣ ತೆಲಗಾವಿ ಹೇಳಿದರು.
ಬೆಂಗಳೂರು ಸಿವಿಲ್ ಪಬ್ಲಿಕೇಷನ್ಸ್, ತೇಜಸ್ ಇಂಡಿಯಾ, ಚಿತ್ರದುರ್ಗ ಬಾಪೂಜಿ ಸಮೂಹ ವಿದ್ಯಾಸಂಸ್ಥೆ ಹಾಗೂ ಅಭಿರುಚಿ ಸಾಹಿತ್ಯಕ, ಸಾಂಸ್ಕೃತಿಕ ವೇದಿಕೆ ಶನಿವಾರ ನಗರದ ಐಎಂಎ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯೂರಿನ ಪ್ರೊ.ಎಂ.ಜಿ. ರಂಗಸ್ವಾಮಿ ಅವರ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಬ್ರಿಟಿಷ್ ಅಧಿಕಾರಿಗಳ ಆಡಳಿತ ಸ್ಮರಿಸುವುದೆಂದರೆ ವಸಾಹತುಶಾಹಿ ಪೋಷಿಸಿದಂತಲ್ಲ, ಅವರು ದೇಶದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನು ನೆನಪು ಮಾಡಿಕೊಳ್ಳುವುದಾಗಿದೆ. ಡಾಬ್ಸ್ ವಾಣಿವಿಲಾಸ ಜಲಾಶಯಕ್ಕೆ ಯೋಜನೆ ರೂಪಿಸಿದ್ದರು. ರಾಷ್ಟ್ರೀಯ ಹೆದ್ದಾರಿ 48ಕ್ಕೆ ಅವರೇ ಕಾರಣ. ಹಲವು ಜನೋಪಯೋಗಿ ಕೆಲಸಗಳನ್ನು ಅವರು ಮಾಡಿದ್ದಾರೆ ಎಂದರು.
ಡಾಬಸ್‌ಪೇಟೆ ಹೊರತುಪಡಿಸಿ ಡಾಬ್ಸ್ ಅವರ ಯಾವುದೇ ಕುರುಹುಗಳಿಲ್ಲ. ಆದ್ದರಿಂದ ಅವರು ಕೊಟ್ಟಿರುವ ಕೊಡುಗೆಗಳನ್ನು ಪರಿಗಣಿಸಿ ಚಿತ್ರದುರ್ಗ ಜಿಲ್ಲೆಯಲ್ಲಿ ಅವರ ಸ್ಮಾರಕ ನಿರ್ಮಿಸಬೇಕಿದೆ. ದೇಶದ ಮೇಲೆ ದಾಳಿ ಮಾಡಿದ್ದ ಬ್ರಿಟಿಷರು ತಮ್ಮ ಆಡಳಿತಾವಧಿಯಲ್ಲಿ ಇಲ್ಲಿ ಹಲವು ಸುಧಾರಣೆಗಳನ್ನೂ ಮಾಡಿದ್ದಾರೆ. ಮೈಸೂರು ಭಾಗದಲ್ಲಿ ಬ್ರಿಟಿಷ್ ಅಧಿಕಾರಿಗಳ ಹಲವು ಸ್ಮಾರಕಗಳಿದ್ದು, ದುರ್ಗದಲ್ಲಿ ಇಲ್ಲ. ಅವರ ಕೆಲಸಗಳ ನೆನಪು ಮುಂದಿನ ಪೀಳಿಗೆಗೂ ತಲುಪಬೇಕಿದೆ ಎಂದರು.
ಸಾಹಿತಿ ಡಾ. ದೊಡ್ಡಮಲ್ಲಯ್ಯ ಮಾತನಾಡಿ, ಇತಿಹಾಸ ದಾಖಲಿಸುವುದು ಎಂದರೆ ಅದು ಬದುಕಿನ ಹುಡುಕಾಟವೇ ಆಗಿದೆ. ಭೂತಕಾಲದ ನೆನಪುಗಳೊಂದಿಗೆ ವರ್ತಮಾನದ ಬೆಳಕಿನೊಂದಿಗೆ ಸಾಹಿತಿ ಭವಿಷ್ಯದ ಹುಡುಕಾಟ ನಡೆಸುತ್ತಾನೆ ಎಂದರು.
ಜಾನಪದ ವಿದ್ವಾಂಸ ಮೀರಾಸಾಬಿಹಳ್ಳಿ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎಂ. ವೀರೇಶ್, ಸಿವಿಜಿ ಚಂದ್ರು, ಲೇಖಕ ಪ್ರೊ.ಎಚ್. ಲಿಂಗಪ್ಪ ಇದ್ದರು. ಪ್ರೊ.ಎಂ.ಜಿ. ರಂಗಸ್ವಾಮಿ ಅವರ ಡಾಬ್ಸ್-ಆಡಳಿತದ ನೋಟಗಳು, ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್, ದುರುಗ ಸೀಮೆ ಸಾಧಕರು, ಹಿರಿಯೂರು ಸೀಮೆ ಜನಪದ ದೈವಗಳು, ಮಾರಿಕಣಿವೆ ಮಡಿಲಲ್ಲಿ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.