ದಾವಣಗೆರೆ: ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ವಿರೋಧಿಸಿ 26 ದಿನಗಳಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಹೋರಾಟ ಬೆಂಬಲಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಕರೆಯಂತೆ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ಅಖಿಲ ಭಾರತ ಪ್ರತಿಭಟನಾ ದಿನವಾಗಿ ಆಚರಿಸಿದರು.
ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಎಸಿ ದುರ್ಗಾಶ್ರೀ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷೆ ಕೆ.ಭಾರತಿ ಮಾತನಾಡಿ, ಆಳುವ ಸರ್ಕಾರವು ಜನರು ಹಾಗೂ ಮಹಿಳೆಯರ ಹಿತಾಸಕ್ತಿಯನ್ನು ಮರೆತಿವೆ. ಘಟನೆ ನಡೆದು ಒಂದು ವರ್ಷ ಕಳೆದರೂ ಆರೋಪಿ ವಿರುದ್ಧ ಕ್ರಮವಾಗಿಲ್ಲ. ಭಾರತಕ್ಕೆ ಚಿನ್ನದ ಪದಕ ತಂದವರ ಸ್ಥಿತಿ ಹೀಗಾದರೆ ಇನ್ನೂ ಸಾಮಾನ್ಯ ಮಹಿಳೆಯರ ಗತಿ ಏನು? ಎಂದು ಪ್ರಶ್ನಿಸಿದರು.
ಡಬ್ಲುೃಎಫ್‌ಐ ಅಧ್ಯಕ್ಷ ಹಾಗೂ ಬಿಜೆಪಿಯ ಸಂಸದ ಬ್ರಿಜ್‌ಭೂಷಣ್ ಶರಣ್‌ಸಿಂಗ್‌ನನ್ನು ಇದುವರೆಗೆ ಬಂಧಿಸಲಾಗಿಲ್ಲ. ಕೂಡಲೆ ಕೇಂದ್ರ ಸರ್ಕಾರ ಆತನನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು.
ಪ್ರಕರಣದ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಸಿ, ತ್ವರಿತ ಗತಿಯಲ್ಲಿ ಶಿಕ್ಷೆ ನೀಡಬೇಕು. ಮಹಿಳಾ ಕುಸ್ತಿಪಟುಗಳ ಮೇಲೆ ಹಲ್ಲೆ ನಡೆದರೂ ಕಾನೂನು ಕ್ರಮ ಕೈಗೊಳ್ಳದಿರುವ ದೆಹಲಿ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷೆ ಬನಶ್ರೀ, ಮಮತಾ, ರೇಷ್ಮಾ, ಸುವರ್ಣಮ್ಮ ಇತರರಿದ್ದರು.
----