ಮೈಸೂರು: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಜನತಂತ್ರ ಜಾಗೃತಿ ವೇದಿಕೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
ನೂರಾರು ಪ್ರತಿಭಟನಾಕಾರರು ನಗರದ ರಾಮಸ್ವಾಮಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು. ದಾರಿಯುದ್ದಕ್ಕೂ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷರು ಅಪ್ರಾಪ್ತ ಹೆಣ್ಣು ಮಕ್ಕಳು, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ, ಹಿಂಸೆ ನೀಡಿರುವುದು ಆಘಾತಕಾರಿ. ದೇಶವೇ ತಲೆತಗ್ಗಿಸುವಂತಹ ಘಟನೆಯಾಗಿದೆ. ಆದ್ದರಿಂದ ಅವರನ್ನು ಕೂಡಲೇ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಹಾಗೂ ಸುಪ್ರೀಂಕೋರ್ಟ್ ನೇಮಿಸುವ ಸಮಿತಿಯಿಂದ ಅವರ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.
ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಒಲಿಂಪಿಕ್ ಪದಕ ವಿಜೇತರಾದ ಕುಸ್ತಿಪಟುಗಳ ನೇತೃತ್ವದಲ್ಲಿ ದೆಹಲಿಯಲ್ಲಿ 40 ದಿನಗಳಿಂದ ಪ್ರತಿಭಟನೆ ನಡೆಸಿದರೂ ನ್ಯಾಯ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಲಿಲ್ಲ. ಬದಲಿಗೆ ಈ ಹೋರಾಟವನ್ನು ಹತ್ತಿಕ್ಕಲು ಅನಾಗರಿಕ ಕ್ರಮ ಅನುಸರಿಸಿ ಕುಸ್ತಿಪಟುಗಳಿಗೆ ಅವಮಾನ ಮಾಡಿದೆ. ದೇಶ-ವಿದೇಶದ ಎದುರು ಅದು ತನ್ನ ವಿಕೃತರೂಪವನ್ನು ತೆರೆದಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಮೌನ ಹಾಗೂ ಬ್ರಿಜ್ ಭೂಷಣ್‌ನ ಈವರೆಗಿನ ಚರಿತ್ರೆಯನ್ನು ಅಮೂಲಾಗ್ರವಾಗಿ ಪರಿಶೀಲಿಸಿದರೆ ಆತನ ರಕ್ತ ಚರಿತ್ರೆಯ ಇತಿಹಾಸ ಮತ್ತು ವರ್ತಮಾನಗಳು ಕಣ್ಣಿಗೆ ರಾಚುತ್ತದೆ. ಆತ ಭಾರತೀಯ ಕುಸ್ತಿ ಫೆಡರೇಷನ್‌ನಲ್ಲಿ ಮುಂದುವರಿಯುವುದು ಎಲ್ಲ ರೀತಿಯಲ್ಲೂ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.
ಜನತಂತ್ರ ಜಾಗೃತಿ ವೇದಿಕೆ ಸದಸ್ಯರಾದ ಕಾಳಚನ್ನೇಗೌಡ, ಚೋರನಹಳ್ಳಿ ಶಿವಣ್ಣ, ಉಮಾದೇವಿ, ಉಗ್ರನರಸಿಂಹೇಗೌಡ, ಕೆಂಪುಗೌಡ, ಹೊಸಕೋಟೆ ಬಸವರಾಜ್, ಎನ್.ಪುನೀತ್, ಸಾಹಿತಿ ನಾ.ದಿವಾಕರ್, ರೈತ ಮುಖಂಡ ಪಿ.ಮರಂಕಯ್ಯ ಇನ್ನಿತರರು ಇದ್ದರು