ಜಿಲ್ಲೆ

ಬ್ರಾಹ್ಮಣರಿಗಿಲ್ಲ ಸರ್ಕಾರಿ ಹಾಸ್ಟೆಲ್​

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್​ ಹಾರನಹಳ್ಳಿ ಬೇಸರ

ತುಮಕೂರು: ಸರ್ವರಿಗೂ ಒಳಿತನ್ನು ಬಯಸುವ "ಸರ್ವೇ ಜನಾ@ ಸುಖಿನೋ ಭವಂತು' ಎಂಬ ವಿಶಾಲ ಮನೋಭಾವವುಳ್ಳವರು ವಿಪ್ರರು ಸಮುದಾಯದವರು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ, ಮಾಜಿ ಅಡ್ವೊಕೇಟ್​ ಜನರಲ್​ ಅಶೋಕ್​ ಹಾರನಹಳ್ಳಿ ಹೇಳಿದರು.

ನಗರದ ಜಯನಗರ ದಕ್ಷಿಣ ಬಡಾವಣೆಯಲ್ಲಿ ಭಾನುವಾರ ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ವಿಪ್ರ ವಿದ್ಯಾರ್ಥಿನಿಯರ ಹಾಗೂ ಉದ್ಯೋಗಸ್ಥ ಮಹಿಳಾ ವಸತಿ ನಿಲಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ವಿಪ್ರ ಸಮುದಾಯದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ತಮ್ಮ ಸ್ವಯಂ ಪ್ರತಿಭೆಯಿಂದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕತೆಗೆ ಸ್ವಂತ ಉದ್ಯಮದಲ್ಲೂ ಯಶಸ್ವಿಯಾಗಿದ್ದಾರೆ. ಅದಕ್ಕೆ ಪೂರಕವಾಗಿ ತುಮಕೂರಿನಲ್ಲಿ ಹೊಯ್ಸಳ ಕರ್ನಾಟಕ ಸಂಘವು ಶಿಕ್ಷಣ ಹಾಗೂ ಉದ್ಯೋಗಕ್ಕೆ ನಗರಕ್ಕೆ ಬರುವ ವಿಪ್ರ ವಿದ್ಯಾರ್ಥಿನಿಯರ ಅನುಕೂಲಕ್ಕೆ ವಸತಿ ನಿಲಯ ನಿರ್ಮಿಸಲು ಮುಂದಾಗಿರುವುದು ಉತ್ತಮ ಕಾರ್ಯ ಎಂದರು. ಸ್ಮಾರ್ಟ್​ ಸಿಟಿ ತುಮಕೂರು ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವಂತಹ ನಗರವಾಗಿದ್ದು, ಬೆಂಗಳೂರಿಗೆ ಹತ್ತಿರದಲ್ಲಿದೆ. ಇನ್ನೂ ಹೆಚ್ಚು ಪ್ರಗತಿಯಾಗುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿದೆ. ಮುಂಬರುವ ದಿನಗಳಲ್ಲಿ ಈ ವಿದ್ಯಾರ್ಥಿನಿಯರ ವಸತಿ ನಿಲಯದ ಉಪಯೋಗ ಇನ್ನೂ ಹೆಚ್ಚಿನ ರೀತಿಯಲ್ಲಿ ಸದ್ಬಳಕೆಯಾಗುತ್ತದೆ. ಅತ್ಯಂತ ಶೀಘ್ರವಾಗಿ ಇದನ್ನು ನಿರ್ಮಿಸಿದರೆ ಇದರಿಂದ ಅನೇಕರಿಗೆ ಅನುಕೂಲವಾಗುವ ಸಂಭವವಿದೆ ಎಂದು ಆಶಿಸಿದರು.

ಬೆಂಗಳೂರು ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ, ಎಲ್ಲ ಜಾತಿ ಸಮುದಾಯದವರಿಗೆ ಸರ್ಕಾರದಿಂದ ವಿದ್ಯಾರ್ಥಿ ನಿಲಯ ಸ್ಥಾಪಿತವಾಗಿದೆ. ಆದರೆ, ಸರ್ಕಾರಿಂದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಎಲ್ಲೂ ಹಾಸ್ಟೆಲ್​ ಸೌಲಭ್ಯವಿಲ್ಲ. ಇಂತಹ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘ ಮಾಡುತ್ತಿರುವ ಕಾರ್ಯ ಅಭಿನಂದನೀಯ ಎಂದರು. ಆರ್ಥಿಕವಾಗಿ ಸಬಲರಾಗಿರುವ ಬ್ರಾಹ್ಮಣರು ಸಮುದಾಯದ ಅಶಕ್ತರಿಗೆ ಸಹಾಯ ಮಾಡುವ ಅವಶ್ಯಕತೆಯಿದೆ. ಇಂದು ಬ್ರಾಹ್ಮಣ ಸಮುದಾಯದ ಬಗ್ಗೆ ಎಲ್ಲ ಪಕ್ಷಗಳಲ್ಲೂ ಅಸಡ್ಡೆಯ ಮನೋಭಾವ ಕಂಡುಬರುತ್ತಿದೆ. ಇದನ್ನು ಹೋಗಲಾಡಿಸಲು ವಿಪ್ರ ಸಮುದಾಯ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ ಎಂದು ಹೇಳಿದರು.

ಪ್ರಸ್ತುತ ನಿರ್ಮಿಸಲು ಉದ್ದೇಶಿಸಿರುವ ವಿದ್ಯಾರ್ಥಿನಿಯರ ಹಾಸ್ಟೆಲ್​ಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಭರವಸೆಯಿತ್ತರು. ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಹಿರಿಯಣ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬ್ರಾಹ್ಮಣಸಭಾ ಅಧ್ಯಕ್ಷ ಎಚ್​.ಎನ್​.ಚಂದ್ರಶೇಖರ್​, ಬೆಂಗಳೂರಿನ ಉದ್ಯಮಿ ಪುಷ್ಪಕ್​ ಪ್ರಕಾಶ್​, ಎಂ.ವಿ.ಸತ್ಯನಾರಾಯಣ, ತಿಪಟೂರಿನ ಸಂಘದ ಅಧ್ಯಕ್ಷ ರವಿಶಾಸ್ತ್ರಿ ಮುಖಂಡರಾದ ಭಾರತಿ ಶ್ರೀನಿವಾಸ್​, ಸಿ.ಎನ್​.ರಮೇಶ್​ ಎಚ್​.ರಾಮಮೂರ್ತಿ, ಸಂದ ಜಿ.ಪ್ರಾಣೇಶ್​, ಡಾ.ಹರೀಶ್​ ಮತ್ತು ವಿಶ್ವಾಸ್​ ಉಪಸ್ಥಿತರಿದ್ದರು.