ಜಿಲ್ಲೆ

ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ

ಕುಶಾಲನಗರ: ಮೈಸೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಚಿಂತಕ ಪ.ಮಲ್ಲೇಶ್ ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.


ಗಣಪತಿ ದೇವಾಲಯದಿಂದ ರಥಬೀದಿ ಮೂಲಕ ಡೋಲು, ಜಾಗಟೆ, ಶಂಖಗಳನ್ನು ಮೊಳಗಿಸಿ ಮೆರವಣಿಗೆ ನಡೆಸಿದರು. ನಂತರ ತಹಸೀಲ್ದಾರ್ ನರಗುಂದ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಗಣಪತಿ ದೇವಾಲಯದ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು ಮಾತನಾಡಿ, ಪಿ.ಮಲ್ಲೇಶ್ ಅವರು ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ನಾವು ಯಾವುದೇ ಪಕ್ಷದಲ್ಲಿರಲಿ ಬ್ರಾಹ್ಮಣರನ್ನು ನಿಂದಿಸಿದರೆ ಸಹಿಸಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಇದರ ಫಲವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಪ.ಮಲ್ಲೇಶ್ ಪಡೆಯುತ್ತಾರೆ ಎಂದು ಹೇಳಿದರು.


ಸುಬ್ಬರಾಮು ಮಾತನಾಡಿ, ಸಂಪ್ರದಾಯಗಳನ್ನು ಪಾಲಿಸಿಕೊಂಡು ಬಂದಿರುವ ಪುಣ್ಯ ಭೂಮಿಯಲ್ಲಿ ವಿಷದ ಬೀಜ ಬಿತ್ತುವ ಪ್ರಯತ್ನ ಖಂಡಿತ ಫಲಿಸುವುದಿಲ್ಲ ಎಂದರು. ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್.ರಾಜಶೇಖರ್ ಮಾತನಾಡಿ, ಸರ್ಕಾರ ಕೂಡಲೇ ಕಾನೂನು ಕ್ರಮ ಜರುಗಿಸಬೇಕು. ಪ.ಮಲ್ಲೇಶ್ ಸಾರ್ವಜನಿಕವಾಗಿ ಬ್ರಾಹ್ಮಣರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.


ಸಂಘದ ಕಾರ್ಯದರ್ಶಿ ಅನಿಲ್ ಶೇಷಾದ್ರಿ, ಖಜಾಂಚಿ ಶ್ರೀದೇವಿ ರಾವ್, ನಾಗೇಂದ್ರ ಬಾಬು, ಡಾ.ರಾಧಾಕೃಷ್ಣ, ಎಂ.ವಿ.ನಾರಾಯಣ, ಮಂಜುನಾಥ್ ಗುಂಡೂರಾವ್, ರಮಾ ವಿಜೇಂದ್ರ, ರಜಿನಿ ಪ್ರದೀಪ್, ಸುಬ್ರಹ್ಮಣ್ಯ ಭಟ್, ಗಿರೀಶ್ ಭಟ್, ಯೋಗೀಶ್ ಭಟ್ ಇತರರು ಹಾಜರಿದ್ದರು.