ಕಿಕ್ಕೇರಿ: ಇಲ್ಲಿನ ಹೊಯ್ಸಳರ ಕಾಲದ ಇತಿಹಾಸ ಪ್ರಸಿದ್ಧ ಬ್ರಹ್ಮೇಶ್ವರ ದೇಗುಲದಲ್ಲಿ ಕಲಾಕರ್ಷಣೆ ಅಂಗವಾಗಿ ಸಂಪ್ರೋಕ್ಷಣೆ ವಿಧಿ ವಿಧಾನಗಳು ವೇದಬ್ರಹ್ಮ ಅನಿಲ್ ಶಾಸ್ತ್ರಿ ನೇತೃತ್ವದಲ್ಲಿ ಜರುಗಿದವು.
ಸೋಮವಾರ ರಾತ್ರಿಯಿಂದ ದೇಗುಲ ಒಳ, ಹೊರಾಲಯವನ್ನು ಶುಚಿಗೊಳಿಸಲಾಯಿತು. ಬ್ರಹ್ಮೇಶ್ವರ, ಗಣಪತಿ, ಸುಬ್ರಹ್ಮಣ್ಯ, ಚಾಮುಂಡೇಶ್ವರಿ, ಬಸವೇಶ್ವರ, ಸೂರ್ಯನಾರಾಯಣ ಮತ್ತಿತರ ಮೂಲಮೂರ್ತಿಗಳನ್ನು ಪಂಚಗವ್ಯಗಳಿಂದ ಶುಚಿಗೊಳಿಸಿದರು. ಪಂಚಗವ್ಯ ಪ್ರೋಕ್ಷಣೆ, ಪುಣ್ಯವಾಚನ, ಗಣಪತಿ ಪೂಜೆ, ರಾಕ್ಷೋಘ್ನ ಹೋಮ, ಅಷ್ಟದಿಕ್ಪಾಲಕರ ಬಲಿ, ಪ್ರಾಯಶ್ಚಿತ ತಿಲಾ ಹೋಮ, ಮರುಪ್ರಾಣ ಪ್ರತಿಷ್ಠಾಪನೆ, ಕಳಾಹೋಮ, ಬ್ರಹ್ಮಕಳಶ ಸ್ಥಾಪನೆ, ಆದಿತ್ಯ ನವಗ್ರಹ ಹೋಮ, ಮೂಲಬ್ರಹ್ಮೇಶ್ವರ ಹೋಮ, ಕುಂಭಾಭಿಷೇಕ ನಡೆದವು. ಮಂಗಳವಾರ ಬ್ರಾಹ್ಮಿ ಮುಹೂರ್ತದಲ್ಲಿ ಬ್ರಹ್ಮೇಶ್ವರನಿಗೆ ಪಂಚಾಮೃತ ಅಭಿಷೇಕ, ಗಂಗಾಜಲಾಭಿಷೇಕ, ಬಿಲ್ವಾರ್ಚನೆ, ಭಸ್ಮಾರ್ಚನೆ ಸೇವೆ ಜರುಗಿತು.
ಸುಗಂಧದ್ರವ್ಯ ಪುಷ್ಪಗಳಿಂದ ಶೃಂಗರಿಸಲಾಗಿತ್ತು. ಮಹಾಮಂಗಳಾರತಿ ಬಳಿಕ ತೀರ್ಥ, ಭಸ್ಮಪ್ರಸಾದವನ್ನು ವಿತರಿಸಲಾಯಿತು.
ಕುಪ್ಪಳ್ಳಿ ರಘು, ಶ್ರೀಹರಿ ಶರ್ಮ, ಆದಿತ್ಯ ಭಾರದ್ವಾಜ್, ಕೆ.ಎಸ್.ಪರಮೇಶ್ವರಯ್ಯ, ಮಹಾಬಲಶರ್ಮ, ಗಣೇಶರಾವ್, ಕೆ.ಎಸ್.ಪ್ರಭಾಕರ್, ರವಿ, ದೀಪಕ್, ವೆಂಕಟೇಶ್, ಪ್ರಸಾದ್, ಗಣೇಶ ಮೂರ್ತಿ, ಬಜರಂಗದಳದ ಅಕ್ಷಯ್ ಮತ್ತಿತರರಿದ್ದರು.