ಜಿಲ್ಲೆ

ಬ್ಯಾನರ್, ಪೋಸ್ಟರ್ ತೆರವಿಗೆ ಜಿಲ್ಲಾಧಿಕಾರಿ ಸೂಚನೆ

 ಹಾಸನ: ಚುನಾವಣೆ ನೀತಿ ಸಂಹಿತೆ ಜಾರಿಯಾಗುವವರೆಗೂ ಕಾಯದೆ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಅಳವಡಿಸಲಾಗಿರುವ ಅನಧಿಕೃತ ಬ್ಯಾನರ್, ಪೋಸ್ಟರ್ ತೆರವು ಮಾಡಿ, ನಿಯಮ ಉಲಂಘಸಿದರೆ ಪ್ರಕರಣ ದಾಖಲಿಸಿ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ತಹಸೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಮಿತಿಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಅವರು, ಎಲ್ಲಾ ಸರ್ಕಾರಿ ಕಚೇರಿ ಗೋಡೆಗಳ ಮೇಲೆ ಇರುವ ಬ್ಯಾನರ್, ಪೋಸ್ಟರ್, ಗೋಡೆ ಬರಹವನ್ನು ಮೊದಲು ತೆರವು ಮಾಡಿ. ಮಾದರಿ ನೀತಿ ಸಂಹಿತೆ ತಂಡ ಈಗಾಗಲೇ ರಚನೆಯಾಗಿದೆ. ತಪಾಸಣೆ ಪ್ರಾರಂಭಿಸಿ, ದೊಡ್ಡ ಪ್ರಮಾಣದ ಖರೀದಿ ವಿತರಣೆ ಬಗ್ಗೆ ನಿಗಾ ವಹಿಸಿ, ಧ್ವನಿವರ್ಧಕ ಅನಧಿಕೃತ ಬಳಕೆ ಹಾಗೂ ದುರ್ಬಳಕೆ ಮೇಲೆ ಪ್ರಕರಣ ದಾಖಲಿಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಬಕಾರಿ ಅಕ್ರಮ ಪ್ರಕರಣಗಳ ಬಗ್ಗೆ ಗಮನ ಹರಿಸಿ. ಜಪ್ತಿ ಮಾಡಿದ ಮದ್ಯದ ಬಗ್ಗೆ ಮಾಹಿತಿ ನೀಡಿ. ಮದ್ಯ ಹಂಚಿಕೆ, ಸಾಮೂಹಿಕ ಊಟೋಪಚಾರ ಬಗ್ಗೆ ನಿಗಾ ಇರಲಿ. ಉಡುಗೊರೆ ವಿತರಣೆ, ಆಮಿಷಗಳ ಬಗ್ಗೆ ಎಚ್ಚರ ವಹಿಸಿ. ಪಕ್ಷದ ಚಿನ್ಹೆ ಬಳಸಿ ಊಟ ಹಂಚಿಕೆ, ಸ್ಟಾಲ್ ಹಾಕುವ ಬಗ್ಗೆ ಗಮನಿಸಿ. ಜಾತ್ರೆಗಳ ಬಗ್ಗೆ ಮೊದಲೇ ಸಭೆ ಕರೆದು ನಿಬರ್ಂಧ ಹಾಗೂ ಅವಕಾಶಗಳ ಕುರಿತು ಸಂಘ-ಸಂಸ್ಥೆಗಳು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಗಮನಕ್ಕೆ ತನ್ನಿ ಎಂದರು.

ಮತಗಟ್ಟೆಗಳಾಗಿರುವ ಶಾಲಾ ಕೊಠಡಿಗಳಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸಿ, ರ‌್ಯಾಂಪ್ ಕಿಟಕಿ ಬಾಗಿಲು, ಶೌಚಾಲಯದ ವ್ಯವಸ್ಥೆ ಸರಿ ಇದೆಯೇ? ಎಂದು ಪರಿಶೀಲಿಸಿ. ಈ ಬಗ್ಗೆ ವಾರದ ಒಳಗೆ ಕ್ರಮ ಕೈಗೊಂಡು ವರದಿ ನೀಡಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮ ಪಂಚಾಯತಿ, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಸೂಕ್ಷ ಮತಗಟ್ಟೆಗಳನ್ನು ಮತ್ತೊಮ್ಮೆ ಪರಿಶೀಲಿಸಿ. ನೀತಿ ಸಂಹಿತೆ ಜಾರಿ ಹಾಗೂ ಲೋಪರಹಿತ ಮತಪಟ್ಟಿ ಸಿದ್ದಪಡಿಸಿ. ಮತದಾರರ ಹೆಸರು ಪಟ್ಟಿಯಿಂದ ಕೈ ಬಿಡುವಾಗ ಗಮನಹರಿಸಿ. ಎರಡೆರಡು ಕಡೆ ಹೆಸರಿದ್ದರೆ ಯಾವ ಮತಗಟ್ಟೆಯಲ್ಲಿ ಹೆಸರು ಉಳಿಸಿಕೊಳ್ಳಬೇಕು ಎಂದು ವಿವರ ಪಡೆದು ಹೆಸರು ತೆಗೆಯಿರಿ ಎಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಬಿ.ಆರ್. ಪೂರ್ಣಿಮಾ ಅವರು ಮಾತನಾಡಿ, ಮತಗಟ್ಟೆಗಳ ದುರಸ್ತಿಗೆ ಅನುದಾನ ಅಗತ್ಯವಿದ್ದರೆ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಕೈಗೊಂಡು ಅನುಮೋದನೆ ಪಡೆಯಿರಿ. ಮತದಾರರ ಜಾಗೃತಿ ಚಟುವಟಿಕೆಗಳನ್ನು ಚುರುಕುಗೊಳಿಸಿ ಎಂದರು.

ಅಪರ ಜಿಲ್ಲಾಧಿಕಾರಿ ಆನಂದ್, ಉಪವಿಭಾಗಾಧಿಕಾರಿಗಳಾದ ಕೃಪಾಲಿನಿ, ಅನ್ಮೋಲ್ ಜೈನ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.