ಬ್ಯಾಡಗಿ: ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಇ-ಟೆಂಡರ್ ಮೂಲಕ ವ್ಯಾಪಾರ ಆರಂಭಿಸಲು ಎಪಿಎಂಸಿ ಸದಸ್ಯರ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಎಸ್.ಬಿ. ನ್ಯಾಮಗೌಡ ಹೇಳಿದರು.
ಇಲ್ಲಿನ ಎಪಿಎಂಸಿ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಆಡಳಿತ ಮಂಡಳಿ ಸದಸ್ಯರ ಸಭೆಯ ಬಳಿಕ ಮಾಹಿತಿ ನೀಡಿದ ಅವರು, ಕೆಲ ಷರತ್ತು ವಿಧಿಸಿ ಮಾರುಕಟ್ಟೆ ವಹಿವಾಟು ಆರಂಭಿಸಲಾಗಿದೆ. ದಲ್ಲಾಳಿಗಳು, ಖರೀದಿದಾರರು ಹಾಗೂ ರೈತರು ಕರೊನಾ ಜಾಗೃತಿ ಹಾಗೂ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಎಪಿಎಂಸಿ ಉಪಾಧ್ಯಕ್ಷ ಉಳಿವೆಪ್ಪ ಕುರುವತ್ತಿ ಸದಸ್ಯರಾದ ದಾನನಗೌಡ್ರ ತೋಟದ, ಮಾಲತೇಶ ಹೊಸಳ್ಳಿ, ಚನ್ನಬಸಪ್ಪ ಹುಲ್ಲತ್ತಿ, ಬಾಬಣ್ಣ ಪಾಟೀಲ, ವಿಜಯಾ ಮಾಳಗಿ, ವೀರಭದ್ರಪ್ಪ ಗೊಡಚಿ, ವನಿತಾ ಗುತ್ತಲ, ನೀಲವ್ವ ಪಾಟೀಲ, ಶಿವಪ್ಪ ಕುಮ್ಮೂರು, ಪ್ರಭಣ್ಣ ದೊಡ್ಡಮನಿ, ವಿಕಾಸ ಕೆ, ರಾಜು ಲಮಾಣಿ ಇತರರಿದ್ದರು.
ಮಾರುಕಟ್ಟೆಯ ಪ್ರಾಂಗಣದಲ್ಲಿ ನಿಬಂಧನೆ: ಸಭೆಯಲ್ಲಿ ಇ-ಟೆಂಡರ್ ಪ್ರಕ್ರಿಯೆ ವೇಳೆ 21 ಷರತ್ತುಗಳನ್ನು ಮಾರುಕಟ್ಟೆಯ ವ್ಯಾಪಾರಸ್ಥರು ಹಾಗೂ ರೈತರು ಕಟ್ಟುನಿಟ್ಟಾಗಿ ಪಾಲಿಸಲು ತಿಳಿಸಲಾಯಿತು. ಮೆಣಸಿನಕಾಯಿ ಚೀಲಗಳನ್ನು ಇ-ಟೆಂಡರ್ಗೆ ಹಾಕುವ ಮುನ್ನ ಪ್ರಾಂಗಣ, ಕಾಂಪೌಂಡ್ಗಳಿಗೆ ಕ್ರಿಮಿನಾಶಕ ಸಿಂಪಡಿಸಬೇಕು. ಪ್ರಾಂಗಣದಲ್ಲಿ ಕೈತೊಳೆಯಲು ಸೋಪಿನ ನೀರು, ಸ್ಯಾನಿಟೈಸರ್, ಕುಡಿಯಲು ಶುದ್ಧ ನೀರು ಒದಗಿಸುವುದು. ಮೆಣಸಿನಕಾಯಿ ಚೀಲ ಪ್ಯಾಕ್ ಮಾಡಲು ಅಂಗಡಿಯ ಹಮಾಲರನ್ನು ನೇಮಿಸಿಕೊಳ್ಳಬೇಕು. ಹೊರ ರಾಜ್ಯಗಳಿಂದ ಅಂಗಡಿಗಳಿಗೆ ಬಂದು- ಹೋಗುವ ಲಾರಿ ಚಾಲಕ, ಕ್ಲೀನರ್ಗಳು ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಂಡ ವೈದ್ಯರ ಚೀಟಿಯನ್ನು ಪಡೆದು, ಅವರ ಮಾಹಿತಿಯನ್ನು ಅಂಗಡಿಗಳಿಗೆ ನೇಮಿಸಿದ ವೇಮನಗಳಲ್ಲಿ ದಾಖಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಪರಸ್ಪರ ಅಂತರ ಪಾಲನೆ ಮಾಡದಿದ್ದಲ್ಲಿ ಹಾಗೂ ಮಾಸ್ಕ್ ಧರಿಸದಿದ್ದಲ್ಲಿ 500 ರೂ. ದಂಡ ವಿಧಿಸಲು ಸೂಚಿಸಲಾಗಿದೆ. ಇ-ಟೆಂಡರ್ ಪ್ರಕ್ರಿಯ ನಡೆಯುವ ಸೋಮವಾರ, ಗುರುವಾರ ಮಾರುಕಟ್ಟೆಯ ಪ್ರಾಂಗಣದಲ್ಲಿ ಮೆಣಸಿನಕಾಯಿ ಲೋಡ್ ಮಾಡುವುದು, ಮೆಣಸಿನಕಾಯಿ ತುಂಬು ತೆಗೆಸುವುದು ನಿಷೇಧಿಸಿದೆ. ಈ ಮೇಲಿನ ಎಲ್ಲ ನಿಯಮಗಳನ್ನು ಪಾಲಿಸದಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
2 ತಿಂಗಳಿಂದ ಮೆಣಸಿನಕಾಯಿ ವಹಿವಾಟು ಸ್ಥಗಿತಗೊಂಡ ಪರಿಣಾಮ ಮಾರುಕಟ್ಟೆಗೆ ಜಮೆಯಾಗುತ್ತಿದ್ದ ಕೋಟ್ಯಂತರ ರೂ. ಶುಲ್ಕ ಸಂದಾಯವಾಗಿಲ್ಲ. ಕರೊನಾ ವೈರಸ್ ಭೀತಿಯ ನಡುವೆಯೂ ವರ್ತಕರ, ರೈತರ ಹಿತಕಾಯುವ ದೃಷ್ಟಿಯಿಂದ ಮಾರುಕಟ್ಟೆ ಇ-ಟೆಂಡರ್ ಪ್ರಕ್ರಿಯೆಗೆ ಅವಕಾಶ ಕಲ್ಪಿಸಿದೆ. ಆದರೆ, ಕಡ್ಡಾಯವಾಗಿ ಷರತ್ತುಗಳನ್ನು ಪಾಲಿಸಬೇಕು. | ಕರಬಸಪ್ಪ ನಾಯ್ಕರ ಎಪಿಎಂಸಿ ಅಧ್ಯಕ್ಷ