ವೀರಯ್ಯಸ್ವಾಮಿ ಚೌಕೀಮಠ ಬ್ಯಾಡಗಿ
ತನ್ನ ಕಂಪು- ಕೆಂಪು ಕಾರಣಕ್ಕಾಗಿ ದೇಶ- ವಿದೇಶಗಳಲ್ಲಿ ಪ್ರಸಿದ್ಧಿಯಾಗಿರುವ ಬ್ಯಾಡಗಿ ಮೆಣಸಿನಕಾಯಿ ವಹಿವಾಟು ಇಲ್ಲಿನ ಎಪಿಎಂಸಿಯಲ್ಲಿ ಸ್ಥಗಿತಗೊಂಡಿದೆ. ಕರೊನಾ ಲಾಕ್ಡೌನ್ನ ಮೂರೂ ಹಂತಗಳಲ್ಲಿ ಇಲ್ಲಿ ಯಾವುದೇ ವ್ಯಾಪಾರ ನಡೆಯದ ಕಾರಣ ಎಪಿಎಂಸಿಗೆ ಅಂದಾಜು 2 ಕೋಟಿ ರೂಪಾಯಿಯಷ್ಟು ಶುಲ್ಕ ನಷ್ಟ ಉಂಟಾಗಿದೆ.
ಇಲ್ಲಿನ ಎಪಿಎಂಸಿಯು 2018-19ರಲ್ಲಿ 19.45 ಕೋಟಿ ರೂ. ಮಾರುಕಟ್ಟೆ ಶುಲ್ಕ ಸಂಗ್ರಹ ಗುರಿ ಹೊಂದಿತ್ತು. ಆದರೆ, 15.14 ಕೋಟಿ ರೂ. ಗಳಷ್ಟು ಶುಲ್ಕವನ್ನು ಸಂಗ್ರಹಿಸಿದ್ದು, ಗುರಿ ಮುಟ್ಟಲಿಲ್ಲ. 2019-20ರಲ್ಲಿ 19.40 ಕೋಟಿ ರೂ. ಗುರಿಯಿದ್ದು, 18.92 ಕೋಟಿ ರೂ. ಮಾರುಕಟ್ಟೆ ಶುಲ್ಕ ಮಾತ್ರ ಸಂಗ್ರಹಗೊಂಡಿತು. ಇನ್ನು 2020-21 ನೇ ಸಾಲಿನ ಆರಂಭದಿಂದಲೂ ಲಾಕ್ಡೌನ್ ಇದ್ದ ಕಾರಣ ಯಾವುದೇ ವಹಿವಾಟು ನಡೆಯದೇ ಶುಲ್ಕವೂ ಸಂಗ್ರಹವಾಗಿಲ್ಲ. ಈ ಅವಧಿಯಲ್ಲಿ ಎಪಿಎಂಸಿಗೆ 2 ಕೋಟಿ ರೂಪಾಯಿಯಷ್ಟು ನಷ್ಟ ಉಂಟಾಗಿದೆ.
ಇಲ್ಲಿನ ಬ್ಯಾಡಗಿ ಕಡ್ಡಿತಳಿಯಲ್ಲಿ ಓಲಿಜೋರಿಯನ್ ಅಂಶ ಹೆಚ್ಚಾಗಿದೆ. ಅಲ್ಲದೆ, ಸಿಹಿ ಕಾರ ಹೊಂದಿರುವ ಡಬ್ಬಿತಳಿ ಗುಣದಿಂದ ದೇಶ-ವಿದೇಶಗಳಲ್ಲಿ ಬೇಡಿಕೆ ಕಾಯ್ದುಕೊಂಡಿದೆ. ಮಾರುಕಟ್ಟೆಯಲ್ಲಿ ಸ್ವಚ್ಛತೆ, ಆನ್ಲೈನ್ ಟೆಂಡರ್ ವ್ಯವಸ್ಥೆ ಮೂಲಕ ಇನ್ನಷ್ಟು ಹೆಸರನ್ನು ಪಡೆದುಕೊಂಡಿದೆ.
ಬಂಪರ್ ಬೆಲೆಗೆ ರೈತರ ಖುಷ್: ಪ್ರಸಕ್ತ ಸಾಲಿನಲ್ಲಿ ಉತ್ತರ ಕರ್ನಾಟಕದಲ್ಲಿ ಉಂಟಾದ ನೆರೆ ಹಾವಳಿಯಿಂದ ಮೆಣಸಿನಕಾಯಿ ಬೆಳೆ ನಷ್ಟಗೊಂಡು, ಮುಂಗಾರು ಮಾರುಕಟ್ಟೆ ವಹಿವಾಟಿನಲ್ಲಿ ಸ್ವಲ್ಪ ಹಿನ್ನಡೆ ಕಂಡುಬಂದಿತ್ತು. ಜನವರಿ ಕೊನೇ ವಾರದವರೆಗೂ 1 ಲಕ್ಷ ಚೀಲ ಆವಕ ದಾಟಿರಲಿಲ್ಲ. ಬಳಿಕ ನೀರಾವರಿ ಬೆಳೆ ಆಗಮಿಸುತ್ತಿದ್ದಂತೆ ಮಾರ್ಚ್ನಲ್ಲಿ ಸತತವಾಗಿ ಒಂದೂವರೆ ಲಕ್ಷ ಚೀಲ ಮೆಣಸಿನಕಾಯಿ ಆವಕದಿಂದ ಪ್ರತಿವಾರವೂ ಕೋಟಿ ರೂ. ಶುಲ್ಕ ಏರಿಕೆ ಕಂಡಿತು. ಬ್ಯಾಡಗಿ ಕಡ್ಡಿ ಕ್ವಿಂಟಾಲ್ಗೆ 2169 ರಿಂದ 25089 ರೂ., ಡಬ್ಬಿ-3009 ರಿಂದ 33045 ರೂ., ಗುಂಟೂರು-765 ರಿಂದ 12089 ರೂ. ದರದಲ್ಲಿ ಮಾರಾಟವಾಗಿದೆ. ರೈತರಿಗಂತೂ ಈ ಬಾರಿ ಬಂಪರ್ ಬೆಲೆ ಲಭಿಸಿದ್ದು, ಲಾಭದ ಲೆಕ್ಕಾಚಾರ ಹೆಚ್ಚಳವಾಗಿದೆ ಎನ್ನಲಾಗಿದೆ.
ರೈತರಲ್ಲಿ ಆತಂಕ: ಏಕಾಏಕಿ ಲಾಕ್ಡೌನ್ ಘೊಷಿಸಿದ ಬಳಿಕ ಮೆಣಸಿನಕಾಯಿ ಮಾರಾಟ ಮಾಡಲು ರೈತರಿಗೆ ತೊಂದರೆಯಾಗಿದೆ. ಲಾಕ್ಡೌನ್ ಆರಂಭವಾದ ಕೆಲ ದಿನಗಳ ನಂತರ ಮುಖ್ಯಮಂತ್ರಿ ಲಾಕ್ಡೌನ್ ಸಡಿಲಿಸಿ, ರೈತರ ಬೆಳೆಗಳ ಮಾರಾಟಕ್ಕೆ ಕೆಲಷರತ್ತುಗಳನ್ನು ವಿಧಿಸಿ ಅವಕಾಶ ಕಲ್ಪಿಸಿದ್ದರು. ಹೀಗಾಗಿ, ಬ್ಯಾಡಗಿಯಲ್ಲಿರುವ ಸುಮಾರು 24 ಕೋಲ್ಡ್ ಸ್ಟೋರೇಜ್ಗಳಲ್ಲಿ ರೈತರು ಮೆಣಸಿನಕಾಯಿ ಚೀಲಗಳನ್ನು ಸಂರಕ್ಷಿಸಲು ತಂದಿಟ್ಟಿದ್ದಾರೆ. ಮಾರುಕಟ್ಟೆಯಲ್ಲಿ ಟೆಂಡರ್ ಪ್ರಕ್ರಿಯೆ ಆರಂಭವಾಗಲು ಹತ್ತಾರು ವಿಘ್ನಗಳು ಎದುರಾಗಿವೆ. ಒಂದೆರಡು ವಾರಗಳಲ್ಲಿ ಮುಂಗಾರು ಮಳೆಬೀಳುವ ಲಕ್ಷಣಗಳಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಬೀಜಗೊಬ್ಬರಕ್ಕೆ ಹಣ ಅಗತ್ಯವಾಗಿದ್ದು, ತಕ್ಷಣ ಮಾರಾಟಕ್ಕೆ ಅವಕಾಶ ಸಿಗದಿದ್ದಲ್ಲಿ ಇನ್ನಷ್ಟು ಆತಂಕ ಎದುರಿಸಬೇಕಿದೆ.
ಸಭೆ ನಂತರ ನಿರ್ಧಾರ: ಮಾರುಕಟ್ಟೆ ಸ್ಥಗಿತಗೊಂಡ ಬಳಿಕ ಖರೀದಿದಾರರು ಹಾಗೂ ಎಪಿಎಂಸಿ ಸದಸ್ಯರೊಂದಿಗೆ ನಾಲ್ಕಾರು ಬಾರಿ ಸಭೆ ನಡೆಸಿದ್ದೇವೆ. ರೈತರಿಗೆ ಒಂದೆರಡು ಬಾರಿ ಟೆಂಡರ್ ಹಾಕಲು ಅವಕಾಶ ಕಲ್ಪಿಸಬೇಕೆಂಬ ಇಚ್ಛೆ ಸಭೆಯಲ್ಲಿ ವ್ಯಕ್ತವಾಗಿದೆ. ಆದರೆ, ಕರೊನಾ ವೈರಸ್ ಹರಡುವಿಕೆ ತಪ್ಪಿಸಲು ಎಲ್ಲ ವ್ಯವಸ್ಥೆ ಮಾಡಿಕೊಂಡು ಜಿಲ್ಲಾಧಿಕಾರಿ ಆದೇಶ ಮೀರದೆ, ನಾವು ಕಾರ್ಯನಿರ್ವಹಿಸಬೇಕಿದೆ. ರಾಜ್ಯದ ಬಹುತೇಕ ಮಾರುಕಟ್ಟೆಗಳು ಆರಂಭವಾಗಿದ್ದು ನಿಜ, ಆದರೆ, ಇಲ್ಲಿಗೆ ಬಂದು-ಹೋಗುವ ವರ್ತಕರು, ರೈತರು ಬೇರೆ-ಬೇರೆ ಜಿಲ್ಲೆ, ರಾಜ್ಯದವರಾಗಿದ್ದು, ನಾವು ತೀವ್ರ ಎಚ್ಚರಿಕೆ ವಹಿಸಲೇಬೇಕಾಗಿದೆ. ಈ ಕುರಿತು ಮೇ 18ರಂದು ಪೂರ್ವಭಾವಿ ಸಭೆ ನಡೆಯಲಿದ್ದು, ಆ ದಿನ ನಿರ್ಧಾರ ಪ್ರಕಟವಾಗಲಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಎಸ್.ಬಿ. ನ್ಯಾಮಗೌಡ ತಿಳಿಸಿದರು.
ಎಪಿಎಂಸಿ ಸೆಸ್ ದರ ಶೇ. 1.5
ಜಿಎಸ್ಟಿ ದರ ಶೇ. 5
ರೈತರಿಗೆ ಈ ಬಾರಿ ಬಂಪರ್ ಬೆಲೆ ಸಿಕ್ಕು ಖುಷಿಯ ವಾತಾವರಣವಿತ್ತು. ಕರೊನಾ ಲಾಕ್ಡೌನ್ನಿಂದ ಮೆಣಸಿನಕಾಯಿ ಮಾರುಕಟ್ಟೆ ಸ್ಥಗಿತಗೊಂಡಿದೆ. ದೇಶದ ಪ್ರಮುಖ ಕೇಂದ್ರಗಳಾದ ದೆಹಲಿ, ಕೊಲ್ಕೊತ್ತಾ, ಮುಂಬೈ, ಮಂಗಳೂರಿಗೆ ಟ್ರಾನ್ಸ್್ಸೋರ್ಟ್ ಕಳುಹಿಸಲಾಗುತ್ತಿತ್ತು. ಕೆಂಪು ವಲಯಗಳಿಗೆ ಲಾರಿಗಳು ತೆರಳುತ್ತಿಲ್ಲ. ಹೀಗಾಗಿ ಮಾರಾಟ, ಟ್ರಾನ್ಸ್ಪೋರ್ಟ್ ಸಮಸ್ಯೆಯಿಂದ ದರ ಕುಸಿತದ ಭೀತಿ ಎದುರಾದರೂ ಆಶ್ಚರ್ಯವಿಲ್ಲ. ಎಕ್ಸ್ಪೋರ್ಟ್ ನಿಧಾನಗತಿಯಲ್ಲಿ ಸಾಗಿದ್ದು, ತುಸು ನಿರಾಳವಾಗಿದೆ. ಕೋಲ್ಡ್ ಸ್ಟೋರೇಜ್ಗಳಲ್ಲಿ ಸಂಗ್ರಹಗೊಂಡ ರೈತರ ಮೆಣಸಿನಕಾಯಿ ಚೀಲಗಳನ್ನು ಟೆಂಡರ್ ಹಾಕಿ ಮಾರಲು ಹಲವು ಆಯಾಮ ಹುಡುಕಿ ರೈತರಿಗೆ ನ್ಯಾಯ ದೊರಕಿಸಬೇಕಿದೆ. ಈ ಕುರಿತು ವರ್ತಕರ ಸಂಘ ಸಭೆ ನಡೆಸಿದೆ.| ರಾಜು ಮೋರಿಗೇರಿ, ಮೆಣಸಿನಕಾಯಿ ವರ್ತಕರ ಸಂಘದ ಕಾರ್ಯದರ್ಶಿ, ಬ್ಯಾಡಗಿ