ಶಿವಮೊಗ್ಗ: ಭದ್ರಾವತಿಯ ಎಂಪಿಎಂನಲ್ಲಿ ಬ್ಯಾಕ್ಲಾಗ್ ಹುದ್ದೆಯಲ್ಲಿರುವ 112 ನೌಕರರಿಗೆ ಸೇವಾ ಭದ್ರತೆ, ವೇತನ ಹೆಚ್ಚಳ ಹಾಗೂ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿಯೋಜಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ತಿಂಗಳೊಳಗೆ ಈಡೇರಿಸದಿದ್ದರೆ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ ಎಂದು ಭದ್ರಾವತಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ತಿಳಿಸಿದರು.
ಎಂಪಿಎಂ ಇನ್ನೂ ಮುಚ್ಚಿಲ್ಲ. ಕೆಲವರು ಮುಚ್ಚಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಕಾರ್ಖಾನೆಯಲ್ಲಿ ಇಂದಿಗೂ ಕೆಲಸ ನಡೆಯುತ್ತಿದೆ. ಮಂಡ್ಯದಲ್ಲಿ ಮುಚ್ಚಿರುವ ಕಾರ್ಖಾನೆ ತೆರೆದು ಅಭಿವೃದ್ಧಿಗೊಳಿಸುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಆದರೆ ತವರು ಜಿಲ್ಲೆಯಲ್ಲಿ ಸಾವಿರಾರು ಜನರಿಗೆ ಅನ್ನ ನೀಡಿದ ಕಾರ್ಖಾನೆ ಮುಚ್ಚುವ ಹಂತಕ್ಕೆ ತಲುಪಿದ್ದರೂ ಅನುದಾನ ನೀಡಿ ಅಭಿವೃದ್ಧಿ ಮಾಡುವ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕಾರ್ಖಾನೆ ವ್ಯಾಪ್ತಿಗೆ ಬರುವ 73 ಸಾವಿರ ಎಕರೆ ಅರಣ್ಯ ಭೂಮಿ, ಕಚ್ಚಾವಸ್ತು, ನೀರು, ಕಾರ್ವಿುಕರು ಎಲ್ಲವನ್ನು ಬಳಸಿಕೊಂಡು ಮತ್ತೆ ಕಾರ್ಖಾನೆ ಅಭಿವೃದ್ಧಿಪಡಿಸಿ ಕಾರ್ವಿುಕರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.
ಎಂಪಿಎಂ ಬ್ಯಾಕ್ ಲಾಗ್ ಉದ್ಯೋಗಿಗಳ ಹೋರಾಟ ಸಮಿತಿ ಅಧ್ಯಕ್ಷ ವಿ.ಎನ್.ದೊಡ್ಡಯ್ಯ ಮಾತನಾಡಿ, ಕಾರ್ಖಾನೆಗೆ 2008ರಲ್ಲಿ ನೇಮಕಗೊಂಡ ಬ್ಯಾಕ್ಲಾಗ್ ಉದ್ಯೋಗಿಗಳಿಗೆ ಸರ್ಕಾರ ವೇತನ ಪರಿಷ್ಕರಿಸಿ ಅವರನ್ನು ವಿವಿಧ ನಿಗಮ ಮಂಡಳಿಗಳಲ್ಲಿ ನಿಯೋಜಿಸಿ ಕಾಯಂ ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಸಮಿತಿ ಉಪಾಧ್ಯಕ್ಷ ಎಂ.ವಿ.ಚಂದ್ರಶೇಖರ್, ಅರ್ಜುನ್, ರಾಥೋಡ್, ಆರ್.ನಾಗರಾಜ್, ಶಿವರಾಜ್, ಲತಾ, ಮಂಜುಳಾ, ತಿಪ್ಪೇಸ್ವಾಮಿ ಹಲವರಿದ್ದರು.