ಜಿಲ್ಲೆ

ಬ್ಯಾಕ್‌ಲಾಕ್ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿ

ಮದ್ದೂರು: ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ಹೆಚ್ಚುತ್ತಿರುವುದನ್ನು ಖಂಡಿಸಿ, ಖಾಸಗಿ ವಲಯದಲ್ಲೂ ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿ.4 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ರಾಷ್ಟ್ರಮಟ್ಟದ ದಲಿತರ ಶೃಂಗ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಎಂ.ಪುಟ್ಟಮಾದು ತಿಳಿಸಿದರು.


ಪಟ್ಟಣದ ಶಿವಪುರದ ರೈಲ್ವೆ ನಿಲ್ದಾಣದಲ್ಲಿ ಮಂಡ್ಯ ಜಿಲ್ಲೆಯಿಂದ ರಾಷ್ಟ್ರಮಟ್ಟದ ಶೃಂಗ ಸಭೆಗೆ ತೆರಳಲಿರುವ ನಿಯೋಗವನ್ನು ಬೀಳ್ಕೊಡುವ ಮುನ್ನ ರೈಲ್ವೆ ನಿಲ್ದಾಣದಲ್ಲಿ ಮಾತನಾಡಿ, ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಿರುವ ಬ್ಯಾಕ್‌ಲಾಕ್ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ಮಹಿಳೆಯರ ಆರೋಗ್ಯ ಮತ್ತು ಅವರ ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು, ವಾಸಕ್ಕೆ ಮನೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಗ್ರಾಮೀಣ ಭೂಹಿತರಿಗೆ ಜೀವನಾವಶ್ಯಕ ಕೂಲಿ ನೀಡಬೇಕು ಹಾಗೂ ದಲಿತರಿಗೆ 5 ಎಕರೆಯವರೆಗೂ ಜಮೀನುಗಳನ್ನು ಮಂಜೂರು ಮಾಡಬೇಕು ಎಂದರು.


ಸರ್ಕಾರದ ಎಲ್ಲ ಖರೀದಿ ಸಂಸ್ಥೆಗಳಲ್ಲಿ ಮತ್ತು ಗುತ್ತಿಗೆಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಸಮರ್ಪಕವಾದ ಮೀಸಲಾತಿ ಸೌಲಭ್ಯವನ್ನು ಒದಗಿಸಬೇಕು. ಚರಂಡಿ ಮತ್ತು ಮಲ ಹೋರುವ ಪದ್ಧತಿಯನ್ನು ಹೋಗಲಾಡಿಸಬೇಕು. ನರೇಗಾ ಯೋಜನೆಯನ್ನು ಬಲಪಡಿಸಿ, 200 ದಿನಗಳಿಗೆ ಕೆಲಸದ ದಿನಗಳನ್ನು ಹೆಚ್ಚಿಸಿ, 600 ರೂ. ಕೂಲಿ ನೀಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಗಗಳಿಗೆ ಕೇಂದ್ರ ಸರ್ಕಾರ ಮೀಸಲಿಟ್ಟ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು ಎಂದರು.


ಅನುದಾನ ಬಳಕೆ ಮಾಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೇ, ಎಲ್ಲ ರಾಜ್ಯಗಳಿಗೂ ಎಸ್ಸಿ, ಎಸ್ಟಿ ಮೀಸಲು ಹಣವನ್ನು ಸಮರ್ಪಕವಾಗಿ ಬಳಸಲು ಸೂಚನೆ ನೀಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲು ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಂಡವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ. ಡಿ.4ರಂದು ದೆಹಲಿಯ ಜಂತರ್‌ಮಂತರ್‌ನಲ್ಲಿ ಲಕ್ಷಕ್ಕೂ ಹೆಚ್ಚು ಮಂದಿಯನ್ನು ಒಳಗೊಂಡ ದಲಿತರ ಶೃಂಗ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.


ರಾಷ್ಟ್ರಾದ್ಯಂತ ಒಂದು ಕೋಟಿಗೂ ಹೆಚ್ಚು ಸಹಿ ಸಂಗ್ರಹ ಮಾಡಲಾಗಿದ್ದು, ಸಹಿ ಸಂಗ್ರಹದ ಮನವಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.


ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ, ಮಳವಳ್ಳಿ ತಾಲೂಕು ಅಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಮಂಡ್ಯ ತಾಲೂಕು ಅಧ್ಯಕ್ಷ ಅಮಾಸಯ್ಯ, ಮದ್ದೂರು ತಾಲೂಕು ಕಾರ್ಯದರ್ಶಿ ಬಿ.ಅರುಣ್ ಕುಮಾರ್, ಮುಖಂಡರಾದ ರಾಮಣ್ಣ, ಕಪನಿಗೌಡ, ಸಂತೋಷ, ರಾಜು, ಜಯಮ್ಮ, ನಂಜಮ್ಮ ಸೇರಿದಂತೆ ಇತರರಿದ್ದರು.