ಜಿಲ್ಲೆ

ಬ್ಯಾಂಕ್ಗಳನ್ನು ವಂಚಿಸಿದ ಗ್ಯಾಂಗ್

ಬಾಬುರಾವ ಯಡ್ರಾಮಿ ಕಲಬುರಗಿ
ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ಗಳಿಂದ ವಾಹನ ಸಾಲ ಪಡೆಯುವ ಮೂಲಕ ವಂಚಿಸುವ ವ್ಯವಸ್ಥಿತ ಜಾಲವೊಂದು ಜಿಲ್ಲೆಯಲ್ಲಿ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಖತರ್ನಾಕ್ ಗ್ಯಾಂಗ್ ಬ್ಯಾಂಕ್ ಅಧಿಕಾರಿಗಳಿಗೆ ಮಕ್ಮಲ್ ಟೋಪಿ ಹಾಕಿದೆ.
ಕೆಲ ತಿಂಗಳಿಂದ ಸದ್ದಿಲ್ಲದೆ ಈ ಗ್ಯಾಂಗ್ನವರು ತಮ್ಮ ಕಾರ್ಯದಲ್ಲಿ ತೊಡಗಿದ್ದು, ವಾಹನ ಖರೀದಿಸುವುದಾಗಿ ಹೇಳಿ ನಗರದ ವಿವಿಧ ಬ್ಯಾಂಕ್ಗಳಿಂದ ಸಾಲ ಪಡೆದಿದ್ದಾರೆ. ಆದರೆ ವಾಹನ ಖರೀದಿ ಮಾಡಿಲ್ಲ. ಅಲ್ಲದೆ ಬ್ಯಾಂಕ್ಗಳಿಗೆ, ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿಸಿದ ಇತರ ಪೂರ್ಣ ಪ್ರಮಾಣದ ದಾಖಲೆಗಳನ್ನೂ ಸಲ್ಲಿಸಿಲ್ಲ. ಇದು ಸಂಶಯ ಮೂಡಿಸಿದೆ.
ಬೆಂಗಳೂರು, ಕಲಬುರಗಿ ಮೊದಲಾದ ಕಡೆ ಪ್ರತಿಷ್ಠಿತ ಕಂಪನಿಗಳ ಕಾರ್ ಡೀಲರ್ಗಳಿಂದ ಪಡೆದ ಕೊಟೇಷನ್ ನಕಲು ಮಾಡಿ ಅದನ್ನೇ ಕಂಪ್ಯೂಟರ್ನಲ್ಲಿ ತಂತ್ರಜ್ಞಾನ ಬಳಸಿ ನಕಲಿ ಕೊಟೇಷನ್ ಸಿದ್ಧಪಡಿಸಿ ಬ್ಯಾಂಕ್ಗಳ ಮೂಲಕ ವಾಹನ ಸಾಲ ಪಡೆಯಲಾಗಿದೆ. ಪರಿಚಯಸ್ಥರಿಗೆ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಅವರ ಆಧಾರ್, ಪ್ಯಾನ್ ಇತರ ದಾಖಲೆಗಳನ್ನು ಬಳಸಿಕೊಂಡು ಬ್ಯಾಂಕ್ ಅಧಿಕಾರಿಗಳನ್ನು ಭೇಟಿ ಮಾಡಿ ವಾಹನ ಸಾಲ ಬೇಡಿಕೆ ಮಂಡಿಸುತ್ತಿದ್ದರು. ಕೊಟೇಷನ್ ಬೆಂಗಳೂರಿನ ಮೋಟಾರ್ ಕಂಪನಿ ಹೆಸರಿನಲ್ಲಿ ನೀಡಿ, ಬ್ಯಾಂಕ್ ಸಾಲದ ಚೆಕ್ ಅನ್ನು ಅದೇ ಹೆಸರಿನಲ್ಲಿ ಪಡೆದುಕೊಳ್ಳುತ್ತಿದ್ದರು ಎಂದು ಗೊತ್ತಾಗಿದೆ.
ಬೆಂಗಳೂರಿನ ರಾಜನಕುಂಟೆಯಲ್ಲಿರುವ ಅದೇ ಹೆಸರಿನಲ್ಲಿ ತೆರೆದಿದ್ದ ಬ್ಯಾಂಕ್ ಖಾತೆ ವಿವರ ನೀಡಿ ಹಣವನ್ನು ಅಲ್ಲಿಗೆ ಜಮೆ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ. ಬಳಿಕ ಆ ಹಣ ಬಸವರಾಜ ಎಂಬುವರು ಡ್ರಾ ಮಾಡಿಕೊಳ್ಳುತ್ತಿದ್ದರು. ಕಲಬುರಗಿ ನಗರದಲ್ಲಿಯೇ ಏಳೆಂಟು ಕಡೆ ಕಾರ್ ಖರೀದಿಗಾಗಿ ಲೋನ್ ಪಡೆದಿದ್ದಾರೆ. ಇನ್ನೂ ಎಷ್ಟು ಕಡೆ ಇಂಥ ಹೇರಾಫೇರಿ ನಡೆದಿದೆ ಎಂಬುದು ತನಿಖೆ ಬಳಿಕವೇ ಗೊತ್ತಾಗಲಿದೆ.

ಬಲೆ ಹೆಣೆಯುವ ಕಾರ್ಯವೈಖರಿ
ಹಿಂದೆ ಹೈದರಾಬಾದ್ನಲ್ಲಿದ್ದು, ಕಲಬುರಗಿಗೆ ವಾಪಸ್ ಬಂದಿರುವ ಜಾಲದ ವ್ಯಕ್ತಿಯೊಬ್ಬ ತಾನು ಖರೀದಿಸಿದ ಕಾರ್ ಅನ್ನು ಸಾರಿಗೆ ಇಲಾಖೆಯಲ್ಲಿ ತಾತ್ಕಾಲಿಕ ಪಾಸಿಂಗ್ (ಟಿಪಿ) ಮಾಡಿಸಿದಾಗ ನೀಡಿದ್ದ ಪ್ರತಿಯನ್ನೇ ಮೂಲವಾಗಿಸಿಕೊಂಡು ಅದರಿಂದಲೇ ಎಲ್ಲ ಕರಾಮತ್ತು ಮುಂದುವರಿಸುತ್ತಿದ್ದ. ಬೆಂಗಳೂರಿನ ಮೋಟಾರ್ ಕಂಪನಿಯೊಂದರ ಹೆಸರಿನಲ್ಲಿ ರಾಜನಕುಂಟೆಯಲ್ಲಿ ಬ್ಯಾಂಕ್ ಖಾತೆ ಸಹ ತೆರೆದು ಚೆಕ್ ಹಣ ಆ ಖಾತೆಗೆ ಜಮೆ ಮಾಡಿಸಿಕೊಳ್ಳುತ್ತಿದ್ದ. ಬ್ಯಾಂಕ್ ಅಧಿಕಾರಿಗಳಿಗೆ ನಕಲಿ ದಾಖಲೆ ಎಂಬುದು ಸಹ ಗಮನಕ್ಕೆ ಬರದಂತೆ ಈ ಕುಖ್ಯಾತ ಗ್ಯಾಂಗ್ ತಮ್ಮ ಕೆಲಸ ಮಾಡಿಕೊಳ್ಳುತ್ತಿತ್ತು ಎನ್ನಲಾಗಿದೆ.

ಬೆಳಕಿಗೆ ಬಂದಿದ್ದು ಹೀಗೆ
ನಗರದ ಸಿಂಡಿಕೇಟ್, ಪಿಕೆಜಿಬಿ ಹೀಗೆ ಕೆಲ ಬ್ಯಾಂಕ್ಗಳಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ 8ಕ್ಕೂ ಹೆಚ್ಚಿನ ವಾಹನ ಸಾಲ ಪಡೆದಿರುವ ಈ ತಂಡ, ಸಾಲ ಪಡೆದ ನಂತರ ಬಳಿಕ ಆರಂಭಿಕ ನಾಲ್ಕೈದು ಇಎಂಐ ಕಟ್ಟಿಕೊಂಡು ಬಂದಿದೆ. ಈ ವೇಳೆಯಲ್ಲಿ ಆರ್ಟಿಒ ಮಾಡಿಸಿದ ದಾಖಲೆಗಳನ್ನು ಬ್ಯಾಂಕ್ಗೆ ತಂದು ಕೊಡಿ ಮತ್ತು ಖರೀದಿಸಿರುವ ಕಾರು ತೋರಿಸಿ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ನಾಲ್ಕೈದು ಬಾರಿ ಕೇಳಿದ್ದರೂ ಹಾಜರುಪಡಿಸಿಲ್ಲ. ಕೇವಲ ಟಿಪಿ ನೀಡಲಾಗಿದೆ. ಇದರಿಂದ ಸಂಶಯಗೊಂಡ ಅಧಿಕಾರಿ, ಪದೇಪದೆ ಬೆನ್ನು ಹತ್ತಿದರೂ ಕುಂಟು ನೆಪ ಹೇಲಲಾಗಿದೆ. ಮೇಲಧಿಕಾರಿಗಳಿಗೆ ಮಾಹಿತಿ ತಿಳಿಸಿದಾಗ, ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ಸ್ಪೆಕ್ಟರ್ ಸಂಜೀವಕುಮಾರ ತನಿಖೆ ಶುರುವಿಟ್ಟಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ಗಳಿಂದ ವಾಹನ ಸಾಲ ಪಡೆದಿರುವ ಬಗ್ಗೆ ದೂರು ಬಂದಿದೆ. ತನಿಖೆ ನಡೆಸಿ ಸಮಗ್ರ ಮಾಹಿತಿ ಕಲೆ ಹಾಕುವಂತೆ ಇನ್ಸ್ಪೆಕ್ಟರ್ಗೆ ಸೂಚನೆ ನೀಡಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಶೀಘ್ರವೇ ಬಹಿರಂಗವಾಗಲಿದೆ.
| ಸತೀಶಕುಮಾರ್ ಎನ್., ನಗರ ಪೊಲೀಸ್ ಆಯುಕ್ತ