ಜಿಲ್ಲೆ

ಬ್ಯಾಂಕ್ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ

ಲಲಾಟಾಕ್ಷ ಎಸ್

ಹನೂರು: ರೈತರು ಬ್ಯಾಂಕ್‌ನಿಂದ ಸಿಗುವ ಸವಲತ್ತುಗಳ ಪ್ರಯೋಜನ ಪಡೆಯುವುದರ ಮೂಲಕ ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ರೈತರಿಗಾಗಿ ಆಯೋಜಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಹನೂರು ಭಾಗದಲ್ಲಿನ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ರೈತರು ಅಭಿವೃದ್ಧಿ ಹೊಂದಬೇಕಾದರೆ ಸರ್ಕಾರದಿಂದ ಸಿಗುವ ಸವಲತ್ತುಗಳ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ಎಸ್‌ಬಿಐ ವ್ಯವಸ್ಥಾಪಕ ಪವನ್ ಮಾತನಾಡಿ, ಬ್ಯಾಂಕ್‌ನಿಂದ ಸಾಮಾಜಿಕ ಭದ್ರತಾ ಯೋಜನೆ ಅಭಿಯಾನದಡಿ ಅಟಲ್ ಪಿಂಚಣಿ, ಜೀವನ್ ಜ್ಯೋತಿ ವಿಮಾ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಗಳ ಸೇವೆ ಒದಗಿಸಲಾಗುತ್ತಿದೆ. ಕೃಷಿಗಾಗಿ ಸಬ್ಸಿಡಿ ದರದಲ್ಲಿ ರೈತರಿಗೆ ಸಾಲ ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಪಪಂ ಅಧ್ಯಕ್ಷೆ ಮಮ್ತಾಜ್ ಬಾನು, ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಸುರೇಖಾ, ಹನೂರು ಶಾಖ ವ್ಯವಸ್ಥಾಪಕ ಸುಖಾಂತ್ ಘೋಷ್ ಇದ್ದರು.