ಜಿಲ್ಲೆ

ಬ್ಯಾಂಕ್ ಪ್ರಗತಿಗೆ ನೌಕರರ ಶ್ರಮ ಕಾರಣ

ವಿಜಯವಾಣಿ ಸುದ್ದಿಜಾಲ ಧಾರವಾಡ
ಅವಿಭಜಿತ ಧಾರವಾಡ ಜಿಲ್ಲೆಯ ಜೀವನಾಡಿಯಾದ ಕೆಸಿಸಿ ಬ್ಯಾಂಕ್ ಆರ್ಥಿಕವಾಗಿ ಪ್ರಗತಿ ಸಾಧಿಸಲು ನೌಕರರ ಶ್ರಮವೇ ಕಾರಣ ಎಂದು ಕೆಸಿಸಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ ಹೇಳಿದರು.
ನಗರದ ಕೆಸಿಸಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕೆಸಿಸಿ ಬ್ಯಾಂಕ್ ನೌಕರರ ಪತ್ತಿನ ಸಹಕಾರಿ ಸಂಘದ 61ನೇ ವಾರ್ಷಿಕ ಮಹಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಹಿರಿಮೆ ಹೊಂದಿರುವ ಬ್ಯಾಂಕ್ ಲಾಭದತ್ತ ಸಾಗಿದೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದಿರುವ ಬ್ಯಾಂಕ್ ಅನೇಕ ಮಾನದಂಡಗಳಲ್ಲಿ ಮುಂಚೂಣಿಯಲ್ಲಿದೆ. ಏಷಿಯಾ ಖಂಡದಲ್ಲೇ ಗುರುತಿಸಿಕೊಳ್ಳುವ ಮಟ್ಟಕ್ಕೇರಿದೆ. ಬ್ಯಾಂಕಿನ ಪ್ರಗತಿಯ ಶ್ರೇಯಸ್ಸಿಗೆ ನೌಕರರ ಪ್ರಾಮಾಣಿಕ ಶ್ರಮವೇ ಕಾರಣ ಎಂದರು.
ಸಾನ್ನಿಧ್ಯ ವಹಿಸಿದ್ದ ನರಗುಂದ ಪತ್ರಿವನದ ಶ್ರೀ ಸಿದ್ಧವೀರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ನೂರು ವರ್ಷಗಳ ಹಿಂದೆ ದಿವಾನ್ ಬಹದ್ದೂರ ಶಾಂತವೀರಪ್ಪ ಮೆಣಸಿನಕಾಯಿ ಹಾಗೂ ರಾವಬಹದ್ದೂರ ರುದ್ರಗೌಡ ಅರಟಾಳ ನೇತೃತ್ವ, ಶ್ರಮದಿಂದ ಸ್ಥಾಪಿತವಾದ ಕೆಸಿಸಿ ಬ್ಯಾಂಕ್ ಈ ಭಾಗದ ಜೀವನಾಡಿಯಾಗಿದೆ. ಗ್ರಾಮೀಣ ಭಾಗದ ಅದರಲ್ಲೂ ರೈತರ ಆರ್ಥಿಕ ಬವಣೆ ನೀಗಿಸುವ ಉದ್ದೇಶದಿಂದ ಆರಂಭಿಸಿದ ಬ್ಯಾಂಕ್ ಈಗ ಇತರ ಬ್ಯಾಂಕ್‌ಗಳಂತೆ ಎಲ್ಲ ತರಹದ ಸೇವೆ ಒದಗಿಸುತ್ತಿದೆ. ಬ್ಯಾಂಕ್ ಸ್ಥಾಪನೆಗೆ ಮಹನೀಯರು ಪಟ್ಟ ಶ್ರಮ ವ್ಯರ್ಥ ಆಗದಂತೆ ನೋಡಿಕೊಳ್ಳುವ ಹೊಣೆ ನೌಕರರದ್ದು ಎಂದರು.
ಸಂಘದ ಅಧ್ಯಕ್ಷ ಶಿವಾನಂದ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಸೇವಾ ನಿವೃತ್ತಿ ಹೊಂದಿದ ಸದಸ್ಯರು ಹಾಗೂ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಸತ್ಕರಿಸಲಾಯಿತು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಮುನಿಯಪ್ಪ, ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ಶಿವಾನಂದ ಆಲದಕಟ್ಟಿ, ಎಂ.ವೈ.ಹೂಗಾರ, ಸದಸ್ಯರಾದ ವಿ.ಎಸ್.ಪಾಟೀಲ, ಶಿವಶಂಕರ ಕಮ್ಮಾರ, ಮಾರುತಿ ಜೀವಾಪೂರ, ವಸಂತ ಚಿಕ್ಕನಗೌಡರ, ನೀಲಮ್ಮ ಗಚ್ಚಿನಕಟ್ಟಿ, ಸುರೇಶ ಅಂಬಿಗೇರ, ಆನಂದ ಕಡಕೋಳ, ಗದಿಗೆಪ್ಪ ಫಕ್ಕೀರಗೌಡರ ಮುಂಜುಳಾ ವೀರೇಶಮಠ, ಇತರರು ಇದ್ದರು.
ಸಿ.ಡಿ.ಮಲ್ಲಾಪುರ ಸ್ವಾಗತಿಸಿದರು. ಮಹಾರಾಜಗೌಡ ಪಾಟೀಲ ನಿರೂಪಿಸಿದರು. ಕೃಷ್ಣಾ ಕಡಕೋಳ ವಂದಿಸಿದರು.