ಜಿಲ್ಲೆ

ಬ್ಯಾಂಕ್​ ನೌಕರನಿಗೆ 6 ತಿಂಗಳ ಜೈಲು ಶಿಕ್ಷೆ

ತಿಪಟೂರು: ಖಾತೆದಾರರ ಹಣ ದುರುಪಯೋಗ ಮಾಡಿಕೊಂಡ ಬ್ಯಾಂಕ್​ ನೌಕರನಿಗೆ ನಗರದ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ನಗರದ ರಾಷ್ಟ್ರೀಕೃತ ಬ್ಯಾಂಕ್​ ನೌಕರನಾಗಿದ್ದ ಎಸ್​.ಲೋಹಿತ್​, ವಿವಿಧ ವ್ಯಕ್ತಿಗಳು ಮತ್ತು ಸಂಸ್ಥೆಯವರು ಬ್ಯಾಂಕಿನಲ್ಲಿಟ್ಟಿದ್ದ 23 ಲಕ್ಷದ 7 ಸಾವಿರ ಠೇವಣಿಯನ್ನು ಠೇವಣಿದಾರರು ಮತ್ತು ಬ್ಯಾಂಕ್​ನ ಮೇಲಧಿಕಾರಿಗಳ ಗಮನಕ್ಕೆ ಬಾರದಂತೆ ದುರುಪಯೋಗಪಡಿಸಿಕೊಂಡಿದ್ದ. ಆಂತರಿಕ ತನಿಖೆಯಲ್ಲಿ ಹಣ ದುರುಪಯೋಗವಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತನಿಂದ ಅಷ್ಟೂ ಹಣವನ್ನು ಠೇವಣಿದಾರರ ಖಾತೆಗೆ ಜಮಾ ಮಾಡಿದ್ದ ಬಗ್ಗೆ ಅಂದಿನ ಪಿಎಸ್​ಐ ದಾಕ್ಷಾಯಿಣಿ ನ್ಯಾಯಾಲಯಕ್ಕೆ ದೋಷಾರೋಪ ಪತ್ರ ಸಲ್ಲಿಸಿದ್ದರು. ಸಾಕ್ಷಿ, ಪರಿಶೀಲಿಸಿದ ನಗರದ ಹಿರಿಯ ದಿವಾನಿ ಮತ್ತು ಜೆಎಂಎಫ್​ಸಿ ನ್ಯಾಯಾಧೀಶ ಸಿ.ಎಫ್​.ಮಹಮದ್​ ಅರೀಫುಲ್ಲಾ ಅವರು ಬುಧವಾರ ಅಪರಾಧಿ ಎಸ್​.ಲೋಹಿತ್​ಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಶಿವಬಸಪ್ಪ ಎಸ್​.ಹುಕ್ಕೇರಿ ವಾದ ಮಂಡಿಸಿದ್ದರು.