ಜಿಲ್ಲೆ

ಬ್ಯಾಂಕ್ ನಲ್ಲಿ 1 ಕೋಟಿ ರೂ. ಮೌಲ್ಯದ ಒಡವೆ ಎಗರಿಸಿದ್ದ ಅಟೆಂಡರ್ ಬಂಧನ

ಹಾಸನ: ಬ್ಯಾಂಕಿನಲ್ಲಿ ಗ್ರಾಹಕರು ಗಿರಿವಿ ಇಟ್ಟಿದ್ದ ಚಿನ್ನವನ್ನು ಲಪಟಾಯಿಸಿ ಪರಾರಿಯಾಗಿದ್ದವ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.

ಅರಕಲಗೂಡು ತಾಲ್ಲೂಕಿನ ಬೆಳವಾಡಿ ಗ್ರಾಮ ಲವ (49) ಬಂಧಿತ ಆರೋಪಿ. ಬೆಳವಾಡಿ ಗ್ರಾಮದ ಎಸ್‌ಬಿಐ ಶಾಖೆಯಲ್ಲಿ ಕಳೆದ ಹತ್ತು ವರ್ಷದಿಂದ ಹೊರಗುತ್ತಿಗೆ ಮೇಲೆ ಅಟೆಂಡರ್ ಕೆಲಸ ಮಾಡುತ್ತಿದ್ದ ಲವ ಸುಮಾರು 1.7 ಕೆಜಿ ಚಿನ್ನವನ್ನ ಕದ್ದು ಪರಾರಿಯಾಗಿದ್ದ. ಇದೀಗ ಈತನನ್ನು ಬಂಧಿಸಲಾಗಿದ್ದು, ಜೂ.23ರವರೆಗೆ ಪೋಲಿಸ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಏನಿದು ಪ್ರಕರಣ?

ಬ್ಯಾಂಕಿನಲ್ಲಿ ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಲವ ಗ್ರಾಹಕರು ಗಿರವಿ ಇಡಲು ಬರುತ್ತಿದ್ದವರ ವಿವರ ಪಡೆದುಕೊಳ್ಳುತ್ತಿದ್ದ. ಬಳಿಕ ನಕಲಿ ಚಿನ್ನ ತಯಾರಿಸಿ ಬ್ಯಾಂಕಿನ ವ್ಯವಸ್ಥಾಪಕರು ಒಡವೆ ಪರಿಶೀಲನೆ ನಡೆಸಿದ ನಂತರ ಈತ ತನ್ನ ಕೈಚಳಕದಿಂದ ನಕಲಿ ಚಿನ್ನಾಭರಣಗಳನ್ನ ಇಟ್ಟು ಅಸಲಿ ಒಡವೆ ದೋಚುತ್ತಿದ್ದ. ಕದ್ದ ಒಡವೆಯನ್ನು ಖಾಸಗಿಯಲ್ಲಿ ಕಂಪನಿಯಲ್ಲಿ ಗಿರವಿ ಇಟ್ಟು ಹಣ ಪಡೆದುಕೊಳ್ಳುತ್ತಿದ್ದ. ಗ್ರಾಹಕರು ತಮ್ಮ ಒಡವೆ ಬಿಡಿಸಿಕೊಳ್ಳಲು ಬರುವ ಸುದ್ದಿ ತಿಳಿಯುತ್ತಿದ್ದಂತೆ ಮತ್ತೆ ಬ್ಯಾಂಕಿನಿಂದ ಬೇರೆ ಒಡವೆಗಳನ್ನು ತೆಗೆದುಕೊಂಡು ಹೋಗಿ ಗಿರಿವಿ ಇಟ್ಟು ಆ ಚಿನ್ನವನ್ನು ತಂದು ಬ್ಯಾಂಕಿನಲ್ಲಿಡುತ್ತಿದ್ದನು ಎಂದು ಮಾಹಿತಿ ನೀಡಿದರು.

ಮೇ 5ರಂದು ಬ್ಯಾಂಕಿನ ಗಿರವಿ ವಿಭಾಗದವರು ಚಿನ್ನ ಪರಿಶೀಲನೆ ವೇಳೆ ಸಿಬ್ಬಂದಿಯ ವಂಚನೆ ಬಯಲಾಗಿದೆ. ಸ್ಥಳೀಯ ಅಧಿಕಾರಿ ನೀಡಿದ ದೂರು ಆಧರಿಸಿ, ಹಾಸನ ನಗರದ ಎಸ್‌ಬಿಐ ಪ್ರಾದೇಶಿಕ ವ್ಯಾವಹಾರಿಕ ಕಚೇರಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಟಿ. ಅನುರಾಧಾ ಅವರು ಜೂನ್ 14ರಂದು ಕೊಣನೂರು ಪೊಲೀಸ್ ಠಾಣೆಗೆ ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಭಿಸಿದ ಪೊಲೀಸರಿಗೆ ಬ್ಯಾಂಕಿನ ಕಪಾಟಿನಲ್ಲಿದ್ದ 30 ಪಾಕೆಟ್ ಚಿನ್ನದಲ್ಲಿ 18 ಪಾಕೆಟ್ ಚಿನ್ನ ನಕಲಿ ಚಿನ್ನ ಇಟ್ಟಿರುವುದು ಆರಂಭಿಕ ತನಿಖೆಯಿಂದ ತಿಳಿದು ಬಂದಿದೆ. ಎರಡು ಪಾಕೆಟ್ ಚಿನ್ನವನ್ನು ಕದ್ದು, ಇತರೆ ಹತ್ತು ಪಾಕೆಟ್‌ಗಳಲ್ಲಿ ಅಲ್ಪ ಪ್ರಮಾಣದ ಚಿನ್ನಕ್ಕೆ ಕನ್ನ ಹಾಕಿದ್ದಾನೆ ಎನ್ನಲಾಗಿದೆ.

2013ರಿಂದ ಬ್ಯಾಂಕಿನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಲವ, ಇತ್ತೀಚೆಗೆ ಅಟೆಂಡರ್ ಆಗಿದ್ದ. ಬ್ಯಾಂಕ್ ಅಧಿಕಾರಿಗಳ ಜತೆ ವಿಶ್ವಾಸ ಗಳಿಸಿ ಚಿನ್ನದ ಸಾಲದ ದಾಸ್ತವೇಜು ಉಸ್ತುವಾರಿ ಹೊತ್ತಿದ್ದ. ತನಗೆ ಬ್ಯಾಂಕಿನಲ್ಲಿ ಸಿಕ್ಕ ಸಲುಗೆ ಬಳಸಿ ಕೋಟಿ ಕೋಟಿ ರೂ. ಮೌಲ್ಯದ ಚಿನ್ನಕ್ಕೆ ಕನ್ನ ಹಾಕಿದ್ದಾನೆ.