ಮೈಸೂರು: ಬ್ಯಾಂಕ್ ಉದ್ಯೋಗಿಯನ್ನೇ ವಂಚಿಸಿ ಆನ್‌ಲೈನ್ ಮೂಲಕ 10. 66 ಲಕ್ಷ ರೂ. ದೋಚಲಾಗಿದೆ.
ಕಲ್ಯಾಣಗಿರಿ ನಿವಾಸಿಯಾಗಿರುವ ಬ್ಯಾಂಕ್ ಉದ್ಯೋಗಿಯೊಬ್ಬರು ತಮ್ಮ ಖಾತೆಯಿಂದ 3 ಹಂತಗಳಲ್ಲಿ ಹಣವನ್ನು ಮೋಸದಿಂದ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಇವರಿಗೆ ಕ್ರೆಡಿಟ್ ಕಾರ್ಡ್ ಸಂಬಂಧ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಬಂದಿದೆ. ಅದರ ವ್ಯಕ್ತಿಯೊಬ್ಬ ಕರೆ ಮಾಡಿ, ನಿಮಗೆ ಕ್ರೆಡಿಟ್ ಕಾರ್ಡ್ ಬೇಕೆ? ಎಂದು ಕೇಳಿದ್ದಾನೆ. ಅದಕ್ಕೆ ಇವರು ನನ್ನ ಬಳಿ ಕ್ರೆಡಿಟ್ ಕಾರ್ಡ್ ಇದೆ. ಹೀಗಾಗಿ ನನಗೆ ಮತ್ತೊಂದು ಕಾರ್ಡ್ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಸರಿ ಹಾಗಾದರೆ ನಾವೊಂದು ಲಿಂಕ್ ಕಳಹಿಸುತ್ತೇವೆ, ಆ ಮೂಲಕ ಕ್ರೆಡಿಟ್ ಕಾರ್ಡ್ ಪ್ರಕ್ರಿಯೆಯನ್ನು ಕ್ಯಾನ್ಸಲ್ ಮಾಡಿಕೊಳ್ಳಿ ಎಂದು ಹೇಳಿ, ಕರೆ ಕಟ್ ಮಾಡಿದ್ದಾನೆ.
ಕರೆ ಮಾಡಿದ್ದವನು ಕ್ರೆಡಿಟ್ ಕಾರ್ಡ್ ಪಡೆಯುವಂತೆ ಯಾವುದೇ ಒತ್ತಾಯಿಸದ ಕಾರಣ ಆತನ ಬಗ್ಗೆ ಅನುಮಾನ ಬಂದಿಲ್ಲ. ಹೀಗಾಗಿ, ಆತ ಕಳುಹಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಆಧಾರ್ ಹಾಗೂ ಅಕೌಂಟ್ ನಂಬರ್ ದಾಖಲಿಸುವಂತೆ ಕೇಳಲಾಗಿದೆ.
ತಕ್ಷಣವೇ ಜಾಗೃತರಾದ ಬ್ಯಾಂಕ್ ಉದ್ಯೋಗಿ, ಯಾವುದೇ ಮಾಹಿತಿ ದಾಖಲಿಸದೆ ಆ ಪೇಜ್‌ನಿಂದ ಹೊರ ಬಂದಿದ್ದಾರೆ. ಅದಾಗಿ 2-3 ಗಂಟೆ ಬಳಿಕ ಅವರ ಒಂದು ಬ್ಯಾಂಕ್ ಖಾತೆಯಿಂದ 2.29 ಲಕ್ಷ ರೂ. ಹಾಗೂ ಮತ್ತೊಂದು ಖಾತೆಯಿಂದ 7.63 ಲಕ್ಷ ರೂ. ಡೆಬಿಟ್ ಆಗಿದೆ.
ಮರುದಿನ ಅವರ ಕ್ರೆಡಿಟ್ ಕಾರ್ಡ್‌ನಿಂದ 74,717 ರೂ. ಕಡಿತಗೊಂಡಿದೆ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.