ಹುಬ್ಬಳ್ಳಿ: ಕರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆಯಾಗಿ ಎಸ್ಬಿಐ ಬ್ಯಾಂಕ್ನ ಕೇಶ್ವಾಪುರ ಮುಖ್ಯ ಶಾಖೆ ವಿನೂತನ ತಂತ್ರಕ್ಕೆ ಮೊರೆ ಹೋಗಿದೆ. ಬ್ಯಾಂಕಿನ ಮುಖ್ಯ ಪ್ರವೇಶ ದ್ವಾರದ ಬಳಿ ಡೆಟಾಲ್ ಮಿಶ್ರಿತ ನೀರು ಇಡಲಾಗಿದ್ದು, ಬ್ಯಾಂಕಿನೊಳಗೆ ಬರುವ ಪ್ರತಿಯೊಬ್ಬ ಗ್ರಾಹಕ ಈ ನೀರಿನಲ್ಲಿ ಕೈತೊಳೆಯುವುದು ಕಡ್ಡಾಯ. ಕೈ ತೊಳೆದು ಬ್ಯಾಂಕಿನೊಳಗೆ ಬರುವಂತೆ ಭದ್ರತಾ ಸಿಬ್ಬಂದಿ ಗ್ರಾಹಕರಿಗೆ ಸೂಚನೆ ನೀಡುತ್ತಿದ್ದಾರೆ.
ಬ್ಯಾಂಕಿಗೆ ಬರುವ ಗ್ರಾಹಕರೊಂದಿಗೆ ಇಲ್ಲಿನ ಸಿಬ್ಬಂದಿ ಒಂದು ಮೀಟರ್ನಷ್ಟು ಅಂತರ ಕಾಯ್ದುಕೊಂಡು ವ್ಯವಹಾರ ನಡೆಸುತ್ತಿದ್ದಾರೆ. ಸಿಬ್ಬಂದಿ ಕುಳಿತುಕೊಳ್ಳುವ ಟೇಬಲ್ನಿಂದ ಒಂದು ಮೀಟರ್ನಷ್ಟು ಅಂತರದಲ್ಲಿ ಪ್ಲಾಸ್ಟಿಕ್ ದಾರ ಕಟ್ಟಲಾಗಿದೆ. ಗ್ರಾಹಕರು ಈ ದಾರದ ಆಚೆಗೆ ನಿಂತುಕೊಂಡೇ ಸಿಬ್ಬಂದಿಯೊಂದಿಗೆ ವ್ಯವಹಾರ ನಡೆಸಬೇಕು. ದಾಖಲೆಗಳನ್ನು ತೋರಿಸುವುದಾಗಲಿ, ಸಹಿ ಮಾಡಿಸುವುದಾಗಲಿ ಸೇರಿದಂತೆ ಇತರ ವ್ಯವಹಾರವನ್ನು ಹಗ್ಗದ ಆಚೆ ನಿಂತುಕೊಂಡೇ ನಡೆಸುವುದು ಗ್ರಾಹಕರಿಗೆ ಅನಿವಾರ್ಯ.
ಗ್ರಾಹಕರೊಂದಿಗೆ ಅಂತರ ಕಾಯ್ದುಕೊಂಡು ವ್ಯವಹಾರ ನಡೆಸುತ್ತಿರುವ ಬ್ಯಾಂಕಿನ ಸಿಬ್ಬಂದಿಯ ಫೋಟೋಗಳು ವೈರಲ್ ಆಗಿವೆ. ಬ್ಯಾಂಕ್ ಸಿಬ್ಬಂದಿಯ ಕ್ರಮಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಬ್ಯಾಂಕ್ ಸಿಬ್ಬಂದಿ ಕರೊನಾದಿಂದ ರಕ್ಷಿಸಿಕೊಳ್ಳಲು ಗ್ರಾಹಕರಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಆಕ್ಷೇಪಗಳೂ ವ್ಯಕ್ತವಾಗಿವೆ.
ಮತ್ತೊಂದೆಡೆ ಸದಾ ಗ್ರಾಹಕರ ದಟ್ಟಣೆ ಇರುತ್ತಿದ್ದ ಈ ಬ್ಯಾಂಕಿಗೆ ಬರುವವರ ಸಂಖ್ಯೆ ಕಳೆದ ಎರಡು ದಿನಗಳಿಂದ ಸಾಕಷ್ಟು ಇಳಿಕೆಯಾಗಿದೆ. ಅವಶ್ಯಕ ಕೆಲಸ ಇರದ ಹೊರತು ಬ್ಯಾಂಕಿಗೆ ಬರದಂತೆ ಗ್ರಾಹಕರಿಗೆ ಸೂಚಿಸಲಾಗುತ್ತಿದೆ.
ಗ್ರಾಹಕರ ಗುಂಪು ವಿಂಗಡಿಸಿ ವಹಿವಾಟು: ಹುಬ್ಬಳ್ಳಿ ಸ್ಟೇಶನ್ ರಸ್ತೆ ಹರ್ಷಾ ಕಾಂಪ್ಲೆಕ್ಸ್ನಲ್ಲಿರುವ ಎಸ್ಬಿಐ ಶಾಖೆ ಸಿಬ್ಬಂದಿ ಕರೊನಾ ಸೋಂಕು ಹರಡದಂತೆ ಮುಂಜಾಗ್ರತೆಯಾಗಿ ಗ್ರಾಹಕರ ಗುಂಪನ್ನು 5ರಂತೆ ವಿಂಗಡಿಸಿ, ಅವರೊಂದಿಗೆ ವ್ಯವಹಾರ ನಡೆಸಿದರು. ಇನ್ನುಳಿದ ಗ್ರಾಹಕರನ್ನು ಬ್ಯಾಂಕಿನ ಹೊರಗೆ ತಡೆದು ನಿಲ್ಲಿಸಲಾಗಿತ್ತು. 2-3 ಜನ ಮಾತ್ರ ಕುಳಿತುಕೊಳ್ಳಲು 1ಆಸನ ವ್ಯವಸ್ಥೆ ಇತ್ತು. ಉಳಿದವರು ತಮ್ಮ ಸರದಿ ಬರುವವರೆಗೆ ಕಾಯಬೇಕಾಯಿತು. ಹಿರಿಯ ನಾಗರಿಕರು ಇದರಿಂದ ಪರದಾಡಿದರು. ಈ ಬ್ಯಾಂಕಿನಲ್ಲಿಯೂ ಗ್ರಾಹಕರ ಸಂಖ್ಯೆ ಸಾಕಷ್ಟು ಇಳಿಮುಖಗೊಂಡಿತ್ತು.
ಅಗತ್ಯ ಕೆಲಸ ಇರದ ಹೊರತು ಬ್ಯಾಂಕಿಗೆ ಬರದಂತೆ ಗ್ರಾಹಕರಿಗೆ ಸೂಚಿಸಲಾಗಿದೆ. ಆದರೂ ಕೆಲ ಗ್ರಾಹಕರು ಪಾಸ್ಬುಕ್ ಪ್ರಿಂಟ್ ಮಾಡಿಸಿಕೊಳ್ಳಲು ಬರುತ್ತಿದ್ದಾರೆ. ಇಂತಹ ಅನಿವಾರ್ಯವಲ್ಲದ ಕೆಲಸಗಳಿಗೆ ಬ್ಯಾಂಕಿಗೆ ಬರದಂತೆ ಸೂಚಿಸಲಾಗುತ್ತಿದೆ. | ನಾಗರಾಜ ತಂತ್ರಿ ಎಸ್ಬಿಐ ಹುಬ್ಬಳ್ಳಿ ಕೇಶ್ವಾಪುರ ಮುಖ್ಯ ಶಾಖೆ, ಸಹಾಯಕ ಪ್ರಧಾನ ವ್ಯವಸ್ಥಾಪಕ
ಮಾಸ್ಕ್ ಖರೀದಿಗೆ ಮುಂದಾದ ಹು-ಧಾ ಮಹಾನಗರ ಪಾಲಿಕೆ: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ನಿತ್ಯ ಬೆಳಗ್ಗೆ ಸ್ವಚ್ಛತೆ ಕಾರ್ಯದಲ್ಲಿ ನಿರತರಾಗುವ ಪೌರ ಕಾರ್ವಿುಕರಿಗಾಗಿ ಮಾಸ್ಕ್ ಖರೀದಿಸಲು ಹು-ಧಾ ಮಹಾನಗರ ಪಾಲಿಕೆ ಮುಂದಾಗಿದೆ.
2500 ಪೌರ ಕಾರ್ವಿುಕರು, 100 ಆರೋಗ್ಯ ನಿರೀಕ್ಷಕರು, 12 ಪರಿಸರ ಇಂಜಿನಿಯರ್ಗಳು, 12 ವಲಯ ಕಚೇರಿ ಸಹಾಯಕ ಆಯುಕ್ತರು ನಿತ್ಯ ನಗರ ನೈರ್ಮಲ್ಯ ಕಾಯಕವನ್ನು ನೋಡಿಕೊಳ್ಳುತ್ತಾರೆ. ಇವರೆಲ್ಲರಿಗೂ ಪಾಲಿಕೆ ಮಾಸ್ಕ್, ಹ್ಯಾಂಡ್ ಗ್ಲೌಸ್ ಖರೀದಿಸಲಿದೆ. ಕರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ‘ಪಾಲಿಕೆಯ ಎಸ್ಎಫ್ಸಿ ಅನುದಾನದಲ್ಲಿ ಪೌರ ಕಾರ್ವಿುಕರಿಗೆ, ಸಿಬ್ಬಂದಿಗೆ ಮಾಸ್ಕ್, ಹ್ಯಾಂಡ್ ಗ್ಲೌಸ್ ಖರೀದಿ ಮಾಡಲಿದ್ದೇವೆ. ಭಾನುವಾರ ವಿತರಿಸಲಿದ್ದೇವೆ. ಪಾಲಿಕೆ ಅಧಿಕಾರಿ, ಸಿಬ್ಬಂದಿಯನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಲಿದ್ದೇವೆ. ಅದಕ್ಕಾಗಿ ಥರ್ಮಲ್ ಸ್ಕ್ರೀನಿಂಗ್ ಕಿಟ್ ಸಹ ಖರೀದಿ ಮಾಡಲಿದ್ದೇವೆ’ ಎಂದು ಆಯುಕ್ತ ಡಾ. ಸುರೇಶ ಇಟ್ನಾಳ ವಿಜಯವಾಣಿಗೆ ತಿಳಿಸಿದ್ದಾರೆ.
ಜನತಾ ಕರ್ಫ್ಯೂ ಪ್ರಚಾರ: ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವ ಮಾ. 22ರ ಜನತಾ ಕರ್ಫ್ಯೂ ಬಗ್ಗೆ ಪಾಲಿಕೆಯು ನಗರದಲ್ಲಿ ಶನಿವಾರ ಪ್ರಚಾರ ನಡೆಸಲಿದೆ. ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಮೂಲಕ ಜನತಾ ಕರ್ಫ್ಯೂ ಕುರಿತ ಧ್ವನಿಮುದ್ರಿತ ಸಂದೇಶ ಪ್ರಸಾರ ಮಾಡಲಿದ್ದೇವೆ. ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಎಲ್ಲರೂ ಮನೆಯಲ್ಲಿಯೇ ಇರಬೇಕು. ಯಾರೂ ಮನೆಯಿಂದ ಹೊರಗೆ ಬರಬಾರದು. ಹೊಟೇಲ್, ಉದ್ಯಮ, ಮಾರುಕಟ್ಟೆ ಬಂದ್ ಇಡುವಂತೆ ಜನತೆಯಲ್ಲಿ ಮನವರಿಕೆ ಮಾಡಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ವಧು-ವರರ ಸಮಾವೇಶ ರದ್ದು: ಮಾ. 22ರ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರದ ಕ್ಲಬ್ ರಸ್ತೆಯ ಮಹಾರಾಷ್ಟ್ರ ಮಂಡಳದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಧು-ವರರ ಸಮಾವೇಶ ರದ್ದುಗೊಳಿಸಲಾಗಿದೆ. ವೀಣಾಶ್ರೀ ಅಸೋಸಿಯೇಟ್ಸ್ ವತಿಯಿಂದ ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಂಡಿದ್ದ ಕುರುಬ ಸಮಾಜದ ಸಮಾವೇಶವನ್ನೂ ರದ್ದುಪಡಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್ ಅಧ್ಯಕ್ಷ ರವಿ ಹಂದಿಗೋಳ ತಿಳಿಸಿದ್ದಾರೆ.