ವಿಶ್ವ ಮೈತ್ರಿ ವೇದಿಕೆ ಮುಖಂಡ ಕೆ.ಟಿ.ರಾಧಾಕೃಷ್ಣ  
ಜಿಲ್ಲೆ

ಬೌದ್ಧ ಸಮಾಜದ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಮಾವೇಶ

ಚಿಕ್ಕಮಗಳೂರು: ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜ .೨೪ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ವಿಶ್ವ ಮೈತ್ರಿ ವೇದಿಕೆ ಮುಖಂಡ ಕೆ.ಟಿ.ರಾಧಾಕೃಷ್ಣ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ರಚಿಸಿ ಆಂಧ್ರಪ್ರದೇಶದ ಬುದ್ಧವನ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಆಗ್ರಹಿಸಿ ನಾಡಿನ ಬಿಕ್ಕು ಮತ್ತು ಬಿಕ್ಕುಣಿ ಸಂಘದ ಪೂಜ್ಯ ಭಂತೆ ಭೋದಿದತ್ತ ಇವರ ನೇತೃತ್ವದಲ್ಲಿ ನ. ೧೫ರಂದು ಪಂಚಶೀಲ ಪಾದಯಾತ್ರೆ ಪ್ರಾರಂಭ ಮಾಡಲಾಗಿತ್ತು. ಈ ಯಾತ್ರೆ ಜ. ೨೩ರಂದು ಬೆಂಗಳೂರಿಗೆ ಆಗಮಿಸಲಿದ್ದು, ಜ. ೨೪ರಂದು ಯಾತ್ರೆಯ ಸಮಾರೋಪದ ಅಂಗವಾಗಿ ಸಮಾವೇಶ ನಡೆಸಿ ವಿವಿಧ ಬೇಡಿಕೆ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.

ಪಾದಯಾತ್ರೆ ಕಲ್ಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸುಮಾರು ೮೦೦ ಕಿ.ಮೀ ಗೂ ಹೆಚ್ಚು ಸಂಚರಿಸಿ ನೂರಾರು ಗ್ರಾಮಗಳಲ್ಲಿ ವಾಸ್ತವ್ಯ ಮಾಡುವ ಮೂಲಕ ಧಮ್ಮ ಸಂದೇಶ ನೀಡಿ ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜನಜಾಗೃತಿ ಮೂಡಿಸಿವೆ ಎಂದು ಹೇಳಿದರು.

ಜ. ೨೩ರಂದು ಡಾ. ಬಿ.ಆರ್ ಅಂಬೇಡ್ಕರ್ ಕನಸಿನ ದಕ್ಷಿಣ ಭಾರತ ಧಮ್ಮ ಕೇಂದ್ರವಾದ ನಾಗಸೇನ ಬುದ್ಧ ವಿಹಾರ ಸದಾಶಿವ ನಗರ ತಲುಪಿ ವಾಸ್ತವ್ಯ ಮಾಡಿ, ಜ.೨೪ ರಂದು ಬೆಳಗ್ಗೆ ೯ ಗಂಟೆಗೆ ಫ್ರೀಡಂ ಪಾರ್ಕ್ನಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರದ ಗಮನ ಸೆಳೆಯಲು ಸಹಕರಿಸಬೇಕೆಂದು ಮನವಿ ಮಾಡಿದರು.

ಈ ಸಮಾವೇಶದಲ್ಲಿ ವಿವಿಧ ಸಂಘ-ಸAಸ್ಥೆಗಳು, ಎಲ್ಲ ದಲಿತಪರ ಸಂಘಟನೆಗಳ ರಾಜ್ಯ ಸಂಚಾಲಕರು, ಮುಖಂಡರು, ನೌಕರರು, ವಿದ್ಯಾರ್ಥಿ ಯುವಜನರು, ಕಾರ್ಮಿಕರು ಮತ್ತು ಪ್ರಗತಿಪರ ಚಿಂತಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ ಅವರು, ಜಿಲ್ಲೆಯಿಂದ ಕನಿಷ್ಟ ಒಂದು ಸಾವಿರ ಮಂದಿ ತೆರಳಲಿz್ದೆÃವೆ ಎಂದು ಹೇಳಿದರು.

ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ರಚಿಸಿ ಅಭಿವೃದ್ಧಿ ಪ್ರಾಧಿಕಾರದ ಯೋಜನೆಯನ್ನು ೨೦೦ ಎಕರೆ ಪ್ರದೇಶದಲ್ಲಿ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಪಡಿಸಬೇಕು. ಸನ್ನತಿಯನ್ನು ೭-ಸ್ಟಾರ್ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು ಎಂಬ ಬೇಡಿಕೆಯೂ ಸೇರಿದಂತೆ ಸುಮಾರು ೧೬ ವಿವಿಧ ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಕೀಲ ಸಿ.ಕೆ. ಜಗದೀಶ್, ಮುಖಂಡರಾದ ಪ್ರೇಮ್‌ಕುಮಾರ್, ಪುನೀತ್, ಶೃಂಗಾರ್ ಮತ್ತಿತರರಿದ್ದರು.