ಮೈಸೂರು: ಮಾನವ ಮೈತ್ರಿಯ ಪಯಣ ಎಂಬ ಆಶಯದೊಂದಿಗೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಎರಡು ದಿನದ ಬೌದ್ಧ ಮಹಾ ಸಮ್ಮೇಳನವು ‘ಬುದ್ಧನಡೆಗೆ... ಒಂದು ಸಾರ್ಥಕ ನಡಿಗೆ’ ಎಂಬ ಸಂದೇಶ ಸಾರಿತು.
ಅಂತಾರಾಷ್ಟ್ರೀಯ ಬೌದ್ಧ ಸಾಂಸ್ಕೃತಿಕ ಸಂಗಮಕ್ಕೆ ಸಾಕ್ಷಿಯಾದ ಸಮಾರಂಭದಲ್ಲಿ ದೇಶ-ವಿದೇಶಗಳಿಂದ ಆಗಮಿಸಿದ ಹಿರಿಯ ಧಮ್ಮಾಚಾರಿಗಳು, ಬೌದ್ಧ ಉಪಾಸಕರು ಬುದ್ಧ ಮತ್ತು ಅಂಬೇಡ್ಕರ್ ಮಾರ್ಗದಲ್ಲಿ ಸಾಗುವ ಮೂಲಕ ‘ಪ್ರಬುದ್ಧ ಭಾರತ ನಿರ್ಮಾಣಕ್ಕೆ’ ಕರೆಕೊಟ್ಟರು.
1956ರ ಅಕ್ಟೋಬರ್ 14ರಂದು ನಾಗಪುರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕಾರ ಮಾಡಿ 69 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಈ ಸಮ್ಮೇಳನದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಅಂದಾಜು 500 ಜನರು ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದರು.
ಕರ್ನಾಟಕ ರಾಜ್ಯ ಭಿಕ್ಕು ಸಂಘ, ರಾಜ್ಯ ಬೌದ್ಧ ಸಂಘ-ಸಂಸ್ಥೆಗಳು, ರಾಜ್ಯ ಅಂಬೇಡ್ಕರ್‌ವಾದಿ ಸಂಘಟನೆಗಳು, ವಿಶ್ವಮೈತ್ರಿ ಬುದ್ಧ ವಿಹಾರದ ಸಹಯೋಗದಲ್ಲಿ ಬೃಹತ್ ‘ನಳಂದ ವೇದಿಕೆ’ಯಲ್ಲಿ ನಡೆದ ಸಮಾರಂಭವನ್ನು ಮಯನ್ಮಾರ್‌ನ ಪನಿಂದ ಸಯಡೋ ಉದ್ಘಾಟಿಸಿದರು.
ಲಾವೋಸ್ ರಾಂಡಿಸೋಟ್ ಸಾನ್ನಿಧ್ಯದಲ್ಲಿ ವಿಯೆಟ್ನಾಂನ ಪೂಜ್ಯ ತಿಚ್ ಮಿನ್ ಹಾನ್ ಧಮ್ಮ ಧ್ವಜಾರೋಹಣ ನೆರವೇರಿಸಿದರು. ತ್ರಿಪಿಟಕ ಅನಾವರಣಗೊಳಿಸಿ, ಬುದ್ಧ ಮತ್ತು ಆತನ ಧಮ್ಮದ ಪ್ರತಿಕೃತಿಯನ್ನು ಅನಾವರಣಗೊಳಿಸಲಾಯಿತು. ವಿವಿಧೆಡೆಯಿಂದ ಆಗಮಿಸಿದ್ದ ಭಂತೆಗಳು ಬುದ್ಧ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಈ ಧರ್ಮದ ಮೂಲತತ್ವವಾದ ತ್ರಿಸರಣ ಬೋಧಿಸಲಾಯಿತು. ತ್ರಿಸರಣದ ಸಾರವಾಗಿರುವ ‘ಬುದ್ಧ ಶರಣಂ ಗಚ್ಛಾಮಿ’(ಜ್ಞಾನೋದಯ ಪಡೆದ ಬುದ್ಧನಿಗೆ ಶರಣಾಗತಿ), ‘ಧರ್ಮ ಶರಣಂ ಗಚ್ಛಾಮಿ’ (ಬುದ್ಧನ ಬೋಧನೆಗಳು, ಅಂದರೆ ಜ್ಞಾನದ ಮಾರ್ಗಕ್ಕೆ ಶರಣಾಗತಿ) ಮತ್ತು ‘ಸಂಘ ಶರಣಂ ಗಚ್ಛಾಮಿ’ (ಬುದ್ಧನ ಮಾರ್ಗದಲ್ಲಿರುವ ಜ್ಞಾನ ಮತ್ತು ಜ್ಞಾನದ ಮಾರ್ಗದಲ್ಲಿರುವ ಸಮುದಾಯಕ್ಕೆ ಶರಣಾಗತಿ) ರಿಂಗಣಿಸಿತು.
ಬೌದ್ಧರ ನೈತಿಕತೆ ಸಂಹಿತೆಯ ಅಡಿಪಾಯವಾದ ‘ಪಂಚಶೀಲ’ ಸಂದೇಶವನ್ನು ಪಠಿಸಲಾಯಿತು. ಐದು ನಿಯಮಗಳಾದ ಜೀವಿಹಿಂಸೆ, ಕಳ್ಳತನ, ಲೈಂಗಿಕ ದುರ್ವರ್ತನೆ, ಸುಳ್ಳು ಹೇಳುವುದು ಮತ್ತು ಅಮಲು ಪದಾರ್ಥಗಳ ಸೇವನೆ ನಿಷೇಧದ ಪಂಚಶೀಲವನ್ನು ಪಾಲನೆ ಮಾಡಬೇಕು ಎಂದು ಕರೆಕೊಡಲಾಯಿತು.
ಪುರಭವನದ ಅಂಬೇಡ್ಕರ್ ಪ್ರತಿಮೆಯಿಂದ ಮಹಾರಾಜ ಕಾಲೇಜು ಮೈದಾನದ ವರೆಗೆ ಮೆರವಣಿಗೆ ನಡೆಯಿತು.
ಬಳಿಕ ಸಮ್ಮೇಳನದಲ್ಲಿ ಮುಖ್ಯವೇದಿಕೆಯ ನಳಂದ ವೇದಿಕೆಯೊಂದಿಗೆ ಸಾಮ್ರಾಟ್ ಅಶೋಕ ವೇದಿಕೆ, ರಾಜ ಕಾನಿಷ್ಕ ವೇದಿಕೆ, ರಾಜ ಹರ್ಷವರ್ಧನ ವೇದಿಕೆ, ಬಾಬಾ ಸಾಹೇಬ್ ಅಂಬೇಡ್ಕರ್ ವೇದಿಕೆಯಲ್ಲಿ ವಿಷಯ ತಜ್ಞರು, ಸಾಹಿತಿಗಳು, ಹೋರಾಟಗಾರರು ವಿಚಾರ ಮಂಡಿಸಿದರು.
ನಾಡಿನ ಗಾಯಕರು, ರಂಗಕರ್ಮಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ ಪ್ರಸ್ತುತ ಪಡಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರಬಂಧ, ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.ವಸ್ತುಪ್ರದರ್ಶನ, ಪುಸ್ತಕ ಮೇಳ ಏರ್ಪಡಿಸಲಾಗಿತ್ತು.