ಚಾಮರಾಜನಗರ: ಸ್ಥಳೀಯ ಹಾಗೂ ದಲಿತ ರಾಜಕಾರಣದಲ್ಲಿ ಹೆಸರುವಾಸಿಯಾಗಿದ್ದ ನಗರಸಭೆ ಮಾಜಿ ಅಧ್ಯಕ್ಷ ಎಸ್.ನಂಜುಂಡಸ್ವಾಮಿ ತಮ್ಮ ಇಚ್ಛೆಯಂತೆಯೇ ಬೌದ್ಧ ಧರ್ಮದ ಪಠಣಗಳ ನಡುವೆ ಲೀನವಾದರು.
ನಗರದ ನ್ಯಾಯಾಲದ ರಸ್ತೆಯ ಸಮೀಪದಲ್ಲಿರುವ ತೋಟದಲ್ಲಿ ಮಂಗಳವಾರ ನಡೆದ ನಂಜುಂಡಸ್ವಾಮಿ ಅವರ ಅಂತ್ಯಕ್ರಿಯೆಯನ್ನು ಕೊಳ್ಳೇಗಾಲದ ಚೇತವನ ಬೌದ್ಧ ವಿಹಾರದ ಮನೋರಖ್ಖಿತ ಭಂತೇಜಿ, ಮೈಸೂರಿನ ಡಾ.ಕಲ್ಯಾಣ ಸಿರಿ ಭಂತೇಜಿ ನೇತೃತ್ವದಲ್ಲಿ ಬೌದ್ಧ ಧರ್ಮದ ವಿಧಿವಿಧಾನಗಳ ಮೂಲಕ ನಡೆಸಿಕೊಟ್ಟರು. ಬಳಿಕ ಕುಟುಂಬಸ್ಥರು, ನೂರಾರು ಹಿತೈಷಿಗಳು ಹಾಗೂ ಅಭಿಮಾನಿಗಳ ಅಶ್ರುತರ್ಪಣದ ನಡುವೆ ನಂಜುಂಡಸ್ವಾಮಿ ಅವರು ಮಣ್ಣಲ್ಲಿ ಮಣ್ಣಾದರು. ಇದಕ್ಕೂ ಮುನ್ನಾ ನ್ಯಾಯಾಲಯ ರಸ್ತೆಯ ಸಮೀಪದಲ್ಲಿದ್ದರುವ ದೀಪಾಂಕರ ಬುದ್ಧ ವಿಹಾರದ ಮುಂಭಾಗ ನಂಜುಂಡಸ್ವಾಮಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆಮಾಡಲಾಗಿತ್ತು. ಹಲವಾರು ರಾಜಕೀಯ ಗಣ್ಯರು, ಕುಟುಂಬಸ್ಥರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡಿ ಅಂತಿಮ ದರ್ಶನವನ್ನು ಪಡೆದುಕೊಂಡರು.
ಬಳಿಕ ದೀಪಾಂಕರ ಬುದ್ಧ ವಿಹಾರದ ಮುಂಭಾಗದಿಂದ ಸಾಗಿದ ಪಾರ್ಥಿವ ಶರೀರದ ಮೆರವಣಿಗೆ ನ್ಯಾಯಾಲಯದ ರಸ್ತೆ, ಬಿ.ರಾಚಯ್ಯ ಜೋಡಿ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಸಾಗಿ ಅಂತ್ಯಕ್ರಿಯೆ ನಡೆಯುವ ತೋಟದಲ್ಲಿ ಮುಕ್ತಾಯವಾಯಿತು. ಸುಮಾರು ಒಂದು ತಾಸುಗಳ ಕಾಲ ಬೌದ್ಧ ಬಿಕ್ಕುಗಳು ಚಂಚಶೀಲ, ತ್ರಿಸರಣ ಹಾಗೂ ವಿವಿಧ ಪಠಣಗಳನ್ನು ಬೋಧನೆ ಮಾಡುವ ಮೂಲಕ ಬೌದ್ಧ ಧರ್ಮದ ಪ್ರಕಾರ ಅಂತ್ಯಕ್ರಿಯೆ ನಡೆಸಿಕೊಟ್ಟರು.
ಗಣ್ಯರಿಂದ ಅಂತಿಮ ದರ್ಶನ:
ಪಶು ಸಂಗೋಪನೆ ಮತ್ತು ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಂಸದ ಸುನೀಲ್ ಬೋಸ್, ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಶೆಟ್ಟಿ, ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಎನ್.ಮಹೇಶ್, ವಿಧಾನ ಪರಿಷತ್ ಮಾಜಿ ಶಾಸಕ ಮಲ್ಲಿಕಾರ್ಜುನಪ್ಪ, ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು, ಬಿಜೆಪಿ ಮುಖಂಡರಾದ ಪಿ.ವೃಷಭೇಂದ್ರಪ್ಪ, ಮೂಡ್ನಕೂಡು ಪ್ರಕಾಶ್, ಅಮ್ಮನಪುರ ಮಲ್ಲೇಶ್ ಹಾಗೂ ಇನ್ನಿತರೆ ಗಣ್ಯರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.
ದುಃಖಿಸಿದ ಶಾಸಕ:
ತನ್ನ ರಾಜಕೀಯ ಏಳಿಗೆಯ ಶಕ್ತಿ ನಂಜುಂಡಸ್ವಾಮಿ ಅವರನ್ನು ಕಳೆದುಕೊಂಡ ಶಾಸಕ ಪುಟ್ಟರಂಗಶೆಟ್ಟಿ ದುಃಖದಲ್ಲಿದ್ದರು. ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲೂ ಭಾಗವಹಿಸಿದೆ, ನಂಜುಂಡಸ್ವಾಮಿ ಅವರ ಶವಯಾತ್ರೆ ಹಾಗೂ ಅಂತ್ಯಕ್ರಿಯೆ ಮುಗಿಯುವವರೆಗೂ ಉಪಸ್ಥಿತರಿದ್ದರು.