ಶಿವಮೊಗ್ಗದಿಂದ ಇರುವಕ್ಕಿ ಮಾರ್ಗಕ್ಕೆ ಸಂಚಾರ ಆರಂಭಿಸಿರುವ ರಾಜ್ಯ ಸಾರಿಗೆ ಸಂಸ್ಥೆ ಬಸ್.  
ಜಿಲ್ಲೆ

ಬೋರ್ಡ್‌ನಲ್ಲಿ ಇರುವ ಊರಿಗೇ ಬರುತ್ತಿಲ್ಲ ಬಸ್!

ಕೌಸ್ತುಭ ಹೆಗಡೆ ಆನಂದಪುರ

ಆನಂದಪುರ ಸಮೀಪದ ಇರುವಕ್ಕಿ ಗ್ರಾಮಸ್ಥರು ಹಾಗೂ ಕೃಷಿ ವಿಶ್ವ ವಿದ್ಯಾಲಯದ ಅಕಾರಿಗಳ ಹಲವು ದಿನಗಳ ಬೇಡಿಕೆಯ ಕಾರಣ ಇರುವಕ್ಕಿ ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಗೊಂಡಿದೆ. ಆದರೆ ಈ ಬಸ್ ಇರುವಕ್ಕಿ ಗ್ರಾಮಕ್ಕೆ ಬರದೆ ಕೇವಲ ಬಸವನಹೊಂಡ ಗ್ರಾಮದಲ್ಲಿರುವ ಕೃಷಿ ವಿವಿ ಪ್ರಧಾನ ಕಚೇರಿವರೆಗೆ ಬಂದು ಹಿಂದಿರುಗುತ್ತಿದೆ. ಇದರಿಂದ ಇರುವಕ್ಕಿ ಗ್ರಾಮದ ಜನತೆಗೆ ತೊಂದರೆ ಉಂಟಾಗುತ್ತಿದೆ.

ಸೆ.11ರಿಂದ ಇರುವಕ್ಕಿ ಮಾರ್ಗದ ಬಸ್ ಸಂಚಾರ ಆರಂಭವಾಗಿದೆ. ವಿ.ವಿ.ಕಚೇರಿಯಿಂದ ಕೇವಲ ಅರ್ಧ ಕಿ.ಮೀ.ದೂರದಲ್ಲಿ ಇರುವಕ್ಕಿ ಗ್ರಾಮದ ವೃತ್ತವಿದೆ. ಆದರೆ ಈ ಬಸ್ ಇಲ್ಲಿಗೆ ಬರುವುದಿಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ.

ಶಿವಮೊಗ್ಗದಿಂದ ಬೆಳಗ್ಗೆ 8.15ಕ್ಕೆ ಹೊರಟು 9.15ಕ್ಕೆ ಕೃಷಿ ವಿವಿ ಕಚೇರಿ ಬಳಿ ಆಗಮಿಸುತ್ತದೆ. 10 ನಿಮಿಷದ ನಂತರ ವಾಪಸ್ ಹೊರಟು 10.30ಕ್ಕೆ ಶಿವಮೊಗ್ಗ ತಲುಪುತ್ತಿದೆ. ಈ ಬಸ್‌ನ ನಾಮಫಲಕದಲ್ಲಿ ಶಿವಮೊಗ್ಗ-ಆನಂದಪುರ-ಇರುವಕ್ಕಿ ಎಂದು ಬರೆದಿದೆ. ಆದರೆ ಈ ಬಸ್ ಮರಳಿ ಹೋಗುವಾಗ ಆನಂದಪುರ ಬಸ್ ನಿಲ್ದಾಣಕ್ಕೆ ಬಾರದೆ ಅರ್ಧ ಕಿ.ಮೀ ಹಿಂದಿರುವ ಯಡೇಹಳ್ಳಿ ವೃತ್ತದ ಮೂಲಕ ಶಿವಮೊಗ್ಗಕ್ಕೆ ಸಾಗುತ್ತಿದೆ.

ಇರುವಕ್ಕಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ವೃತ್ತದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವಕ್ಕಿ, ಸರಗುಂದ, ತೋಳಿಕಲ್ಲು, ಕರಡಿಮನೆ, ನಾಗರಮನೆ, ಕಲ್ಲಾರೆದಿಂಬ, ಕೆರೆಕೊಪ್ಪ ಗ್ರಾಮಗಳ 30ಕ್ಕೂ ಅಕ ವಿದ್ಯಾರ್ಥಿಗಳು ಆನಂದಪುರ ಮತ್ತು ಸಾಗರದ ಪ್ರೌಢ ಶಾಲೆ, ಪಿಯು ಕಾಲೇಜು ಮತ್ತು ಡಿಗ್ರಿ ಕಾಲೇಜಿಗೆ ಹೋಗಲು ಬಸ್‌ಗಾಗಿ ಕಾಯುತ್ತಿರುತ್ತಾರೆ.

ಈ ಮಾರ್ಗದಲ್ಲಿ ಹೊಸನಗರದಿಂದ ಶಿಕಾರಿಪುರಕ್ಕೆ ಸಾಗುವ ಒಂದು ಖಾಸಗಿ ಬಸ್ ಬೆಳಗ್ಗೆ 9 ಗಂಟೆಗೆ ಬರುತ್ತದೆ. ಈ ಬಸ್ ಅತ್ಯಕ ಪ್ರಯಾಣಿಕರಿಂದ ತುಂಬಿರುತ್ತದೆ. ಈಗ ಹೊಸದಾಗಿ ಆರಂಭವಾದ ಸರ್ಕಾರಿ ಬಸ್ ಇರುವಕ್ಕಿ ಗ್ರಾಮದ ವೃತ್ತದವರೆಗೆ ಬಂದು ಆನಂದಪುರ ಬಸ್ ನಿಲ್ದಾಣಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅಲ್ಲದೆ ಗ್ರಾಮದ ವೃದ್ಧರು, ಮಹಿಳೆಯರು ಮತ್ತು ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗುವ ಜನರಿಗೆ ಅನುಕೂಲವಾಗುತ್ತದೆ. ಕೇವಲ ವಿವಿ ಕಚೇರಿವರೆಗೆ ಸಂಚರಿಸುವ ಸರ್ಕಾರಿ ಬಸ್ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ. ಕೆಎಸ್‌ಆರ್‌ಟಿಸಿ ಅಕಾರಿಗಳು ಹಾಗೂ ಜಿಲ್ಲಾಕಾರಿ ಈ ಬಗ್ಗೆ ಗಮನಹರಿಸಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶಿವಮೊಗ್ಗದಿಂದ ಹೊಸದಾಗಿ ಸಂಚಾರ ಆರಂಭಿಸಿದ ಸರ್ಕಾರಿ ಬಸ್ ನಮ್ಮ ಊರಿನ ಮುಖ್ಯ ವೃತ್ತದವರೆಗೆ ಬರಲೇಬೇಕು. ಬಸ್‌ನ ನಾಮಫಲಕ ಇರುವಕ್ಕಿ ಎಂದು ಇದೆ. ಆದರೆ ಬಸವನಹೊಂಡ ಗ್ರಾಮದವರೆಗೆ ಮಾತ್ರವೇ ಈಗ ಬಂದು ತಲುಪುವ ಸ್ಥಳವಾಗಿದೆ. ಬರಬೇಕಾದ ಬಸ್ ಸ್ಥಳಕ್ಕೆ ಬರದಿದ್ದರೆ ಸಾರ್ವಜನಿಕರ ಪ್ರತಿಭಟನೆ ಅನಿವಾರ್ಯವಾಗಲಿದೆ.

ಅರುಣ್ ಗೌಡ ಕರಡಿಮನೆ, ಯಡೇಹಳ್ಳಿ ಗ್ರಾಪಂ ಸದಸ್ಯರು

ಇರುವಕ್ಕಿ ಗ್ರಾಮದ ವೃತ್ತದಲ್ಲಿ ಪ್ರತಿ ದಿನ 25-30 ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಕಾಯುತ್ತಿರುತ್ತಾರೆ. ನಿತ್ಯ ಬಸ್ ಹತ್ತಲಾಗದ ಪರಿಸ್ಥಿತಿ ಇದೆ. ಸರ್ಕಾರಿ ಬಸ್ ಇಲ್ಲಿಯವರೆಗೆ ಬರಬೇಕು ಎಂಬುದು ನಮ್ಮ ಆಗ್ರಹ.

ಸರಗುಂದ ಲೋಕೇಶ, ಗ್ರಾಮದ ಮುಖಂಡ