ಬೋರಗಾಂವ: ಪಕ್ಷ, ಜಾತಿ ಭೇದವಿಲ್ಲದೆ ಜನಸಾಮಾನ್ಯರ ಅಭಿವೃದ್ಧಿಗಾಗಿ ನಿಪ್ಪಾಣಿ ತಾಲೂಕಿಗೆ ಅತ್ಯಧಿಕ ಅನುದಾನ ಮಂಜೂರಾತಿಗೆ ಶ್ರಮಿಸಿದ್ದೇನೆ. ಬೋರಗಾಂವ ಸಮಗ್ರ ಅಭಿವೃದ್ಧಿಗೆ ಸರ್ಕಾರದ ವಿವಿಧ ಯೋಜನೆಗಳ ಮೂಲಕ ೧೩ ವರ್ಷಗಳಿಂದ ಅನುದಾನ ನೀಡಿದ್ದೇನೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಪಟ್ಟಣದಲ್ಲಿ ಅಲ್ಪಸಂಖ್ಯಾತ ಇಲಾಖೆಯಿಂದ ಮಂಜೂರಾದ ೩ ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಸಮುದಾಯ ಭವನ, ಶಾಲಾ ಕಾಲೇಜು, ಅಂಗನವಾಡಿ, ರಸ್ತೆಗಳು, ಆರೋಗ್ಯ ಕೇಂದ್ರ, ನೀರಿನ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಹೈಟೆಕ್ ಬಸ್ ನಿಲ್ದಾಣ, ಉಚಿತ ಗ್ಯಾಸ್, ದೇವಾಲಯಗಳ ಜೀರ್ಣೋದ್ಧಾರ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ೧೦೫ ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಶರದ ಜಂಗಟೆ ಮಾತನಾಡಿ, ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಬೋರಗಾಂವ್ ಪ್ರಗತಿಗೆ ಇಲ್ಲಿಯವರೆಗೆ ೧೦೦ ಕೋಟಿ ರೂ.ಗೂ ಹೆಚ್ಚು ಹಣ ನೀಡಿದ್ದಾರೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ೩ ಕೋಟಿ ರೂ. ಹಣ ನೀಡಿದ್ದು, ಅದರಲ್ಲಿ ವಾರ್ಡ್ ನಂ.೧, ೧೦ ಮತ್ತು ೧೨ರ ಎಲ್ಲ ರಸ್ತೆಗಳು ಮತ್ತು ಚರಂಡಿ ಕಾಮಗಾರಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಣಕಾಪುರ ಗ್ರಾಪಂ ಉಪಾಧ್ಯಕ್ಷ ಯೂನಸ್ ಮುಲ್ಲಾನಿ, ಬಾಬಾಸಾಹೇಬ ಚೌಗುಲೆ, ಪಾಂಡುರಂಗ ಖೋತ ಮಾತನಾಡಿದರು.
ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ನಿರ್ದೇಶಕ ರಾಮಗೊಂಡ ಪಾಟೀಲ, ನಿತೇಶ ಖೋತ, ಅಣ್ಣಾ ಪಾಟೀಲ, ಅರವಿಂದ ಖಾರಡೆ, ಸುಕುಮಾರ ಚೌಗುಲೆ, ಶೀತಲ ಲಡಗೆ, ದಾದಾ ಭಾದುಲೆ, ಬಾಬಾಸಾಹೇಬ ಚೌಗುಲೆ, ದೇವಪ್ಪ ದೇವಕಾತೆ, ಜಿತೇಂದ್ರ ಪಾಟೀಲ, ಪಂಚಗಂಗಾ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಹಾವೀರ ಚೌಗುಲೆ, ಅಮಿತ್ ಮಾಳಿ, ಉತ್ತಮ ಕದಂ, ಮಹಾದೇವ ನೇಜೆ, ಅಜಿತ್ ಕಾಂಬಳೆ, ಅಜಿತ ತೆರದಾಳೆ, ಇಂದುಮತಿ ಹಿರೇಮಠ, ಫಿರೋಜ್ ಅಪರಾಜ್, ನಮ್ರತಾ ದೇಸಾಯಿ, ಭಾರತ ಜಂಗಟೆ ಇತರರಿದ್ದರು.