ಮಂಡ್ಯ : ಮದ್ದೂರು ತಾಲೂಕಿನ ಆತಗೂರು ಹೋಬಳಿಯ ತೂಬಿನಕೆರೆ ಗ್ರಾಮದ ಹೊರ ವಲಯದಲ್ಲಿ ಗುರುವಾರ ಬೆಳಗ್ಗೆ ಚಿರತೆಯೊಂದು ಬೋನಿಗೆ ಬಿದ್ದಿದೆ.
ಗ್ರಾಮದ ರೈತ ರಾಮೇಗೌಡ ಎಂಬುವರ ಜಮೀನಿನಲ್ಲಿ ಬೋನು ಇರಿಸಲಾಗಿತ್ತು. ಕುರಿ ಮಾಂಸ ತಿನ್ನಲು ಬಂದು ಚಿರತೆ ಸೆರೆಯಾಗಿದೆ. ಸುಮಾರು 2 ವರ್ಷದ ಹೆಣ್ಣು ಚಿರತೆ ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಗ್ರಾಮಕ್ಕೆ ಚಿರತೆ ಬಂದು ಕುರಿಯನ್ನು ಸಾಯಿಸಿ ತಿಂದು ಹೋಗಿತ್ತು.
ಚಿರತೆ ಸೆರೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಿಟ್ಟಿಸಿರು ಬಿಟ್ಟಿದ್ದಾರೆ. ಜತೆಗೆ ಈ ಭಾಗದಲ್ಲಿ ಇನ್ನೂ ಚಿರತೆಗಳು ಇದ್ದು, ಅವುಗಳನ್ನು ಹಿಡಿಯಲು ಅರಣ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲೂಕು ಅರಣ್ಯಾಧಿಕಾರಿ ಗವಿಯಪ್ಪ, ತಾಲೂಕು ಉಪ ವಲಯ ಅರಣ್ಯಾಧಿಕಾರಿ ರವಿ, ಅರಣ್ಯ ಪಾಲಕ ಸುದರ್ಶನ್, ಅರಣ್ಯ ರಕ್ಷಕರಾದ ರಮೇಶ್, ಮೊಟ್ಟಪ್ಪ ಅವರು ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ಅರಣ್ಯಕ್ಕೆ ಬಿಡಲು ಕ್ರಮ ಕೈಗೊಂಡರು.