ಮೈಸೂರು: ಕಾನೂನಿನ ಅಡಿಯಲ್ಲಿ ಆಸ್ತಿ ಮಾಲೀಕತ್ವದ ಪುರಾವೆ ಅಥವಾ ಮಾಲೀಕತ್ವದ ಪ್ರಮಾಣಪತ್ರವನ್ನು ಸಿದ್ಧಪಡಿಸುವ ನಕ್ಷಾ (ರಾಷ್ಟ್ರೀಯ ಭೂ ಪ್ರಾದೇಶಿಕ ಜ್ಞಾನ ಆಧಾರಿತ ಭೂ ಸಮೀಕ್ಷೆ) ಯೋಜನೆಗೆ ಬೋಗಾದಿ ಪಟ್ಟಣ ಪಂಚಾಯಿತಿಯಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ಈ ಯೋಜನೆಯನ್ನು ಪ್ರಾಯೋಗಿಕವಾಗಿ ರಾಜ್ಯ 10 ನಗರ ಪ್ರದೇಶ ಸೇರಿದಂತೆ ದೇಶದಲ್ಲಿ 152 ನಗರ ಪ್ರದೇಶಗಳಲ್ಲಿ ಇಂದಿನಿಂದ ಅಳತೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಈ ಪೈಕಿ ಬೋಗಾದಿ ಪಟ್ಟಣ ಪಂಚಾಯಿತಿ ಒಳಗೊಂಡಿದೆ.
ಇದು ಕೇಂದ್ರ ಸರ್ಕಾರದ ಭೂ ಸಂಪನ್ಮೂಲ ಇಲಾಖೆಯ ಆರಂಭಿಸಿದ್ದು, ರಾಜ್ಯ ಕಂದಾಯ ಇಲಾಖೆ, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ, ಪೌರಾಡಳಿತ ಇಲಾಖೆ, ಸರ್ವೇ ಆಫ್ ಇಂಡಿಯಾ ಸಹಭಾಗಿತ್ವದಲ್ಲಿ ಇದು ಅನುಷ್ಠಾನಕ್ಕೆ ತರಲಾಗಿದೆ.
ಡ್ರೋನ್, ಯುಎವಿ ಆಧುನಿಕ ತಂತ್ರಜ್ಞಾನ ಆಧಾರಿತ ಆಸ್ತಿಗಳನ್ನು ಹೊಸದಾಗಿ ಭೂಮಾಪನ ಮಾಡಿ ಗಣಕೀಕೃತ ಆಸ್ತಿ ಪತ್ರವನ್ನು ಸೃಜಿಸುವುದು ಈ ಯೋಜನೆ ಉದ್ದೇಶ. ಬೋಗಾದಿಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸುಮಾರು 30,414 ಆಸ್ತಿಗಳನ್ನು ಏರಿಯಲ್ ಸರ್ವೇ ಮೂಲಕ ಅಳತೆ ಮಾಡಲಾಗುತ್ತದೆ. ಅಂತಿಮವಾಗಿ ಭೂಮಾಲೀಕರಿಗೆ ಆಸ್ತಿ ಕಾರ್ಡ್ ವಿತರಣೆ ಮಾಡಲಾಗುತ್ತದೆ.
ಪ್ರಯೋಜನಗಳು ಏನು?
ಭೂ ಮಾಲೀಕತ್ವದ ಕುರಿತು ಕಾನೂನಾತ್ಮಕ ಸ್ಪಷ್ಟತೆ ಒದಗಿಸುವುದು, ವಿವಾದ ಪರಿಹರಿಸಿ ಅತಿಕ್ರಮಣ ತಡೆಯಲು ಸಹಕಾರಿಯಾಗಿದೆ. ಆಸ್ತಿ ಹಕ್ಕುಗಳಿಗೆ ಮೂಲ ದಾಖಲೆಯಾಗಿ ಪರಿಗಣಿಸಬಹುದು. ಮಾಲೀಕತ್ವವನ್ನು ಕಾನೂನಾತ್ಮಕವಾಗಿ, ದಾಖಲೆಗಳ ಮೂಲಕ ಖಚಿತ ಪಡಿಸಿಕೊಳ್ಳಬಹುದು. ಇದು ನಗರ ಯೋಜನೆಗಳನ್ನು ಸುಗಮಗೊಳಿಸುತ್ತದೆ. ಮೂಲಸೌಕರ್ಯ ಕಲ್ಪಿಸಲು, ವಲಯ ನಿಯಮಾವಳಿ ಜಾರಿ ತರಲು ಅನುವು ಮಾಡಿಕೊಡುತ್ತದೆ. ಹೀಗೆ ಇತರ ಲಾಭಗಳು ಈ ಯೋಜನೆಯಿಂದ ದೊರೆಯಲಿವೆ.
ಬೋಗಾದಿಯ ರಂಗಮಂದಿರದಲ್ಲಿ ಆಯೋಜಿಸಿದ್ದ ನಕ್ಷಾ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜಿ.ಟಿ. ದೇವೇಗೌಡ ಅವರು, ಭೂಮಾಲೀಕತ್ವದ ನಿಖರವಾದ ದಾಖಲಾತಿಯನ್ನು ರಚಿಸಲು ಮತ್ತು ನವೀಕರಿಸಲು, ಭೂ ವಿವಾದಗಳನ್ನು ಪರಿಹರಿಸಲು, ಆಸ್ತಿ ದಾಖಲೆ ಸುಗಮಗೊಳಿಸಲು ಮತ್ತು ನಗರ ಯೋಜನೆಯನ್ನು ಹೆಚ್ಚಿಸಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದರು.
ಪ್ರಾದೇಶಿಕ ಭೂದಾಖಲೆಗಳ ಜಂಟಿ ನಿರ್ದೇಶಕ ಇ.ಪ್ರಕಾಶ್ ಮಾತನಾಡಿ, ಆಸ್ತಿ ದಾಖಲಾತಿ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಆದರೆ, ಪಿಆರ್ ಕಾರ್ಡ್ ಹೊಂದಿರುವ ಆಸ್ತಿಯಲ್ಲಿ ಯಾವುದೇ ವಂಚನೆ ಆಗುವ ಸಾಧ್ಯತೆ ಇರಲ್ಲ ಎಂದರು.
ನಕ್ಷಾ ಯೋಜನೆಯಿಂದ ಆಸ್ತಿ ಮೌಲ್ಯವನ್ನು ನಿರ್ಣಯಿಸುವುದು, ತೆರಿಗೆಯನ್ನು ನ್ಯಾಯಯುತವಾಗಿ ವಿಧಿಸಲು, ಪರಿಣಾಮಕಾರಿಯಾಗಿ ಸಂಗ್ರಹಿಸಲು ಸಹಕಾರಿಯಾಗಲಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ದಾಖಲೆ ಬಳಸಿದ್ದಲ್ಲಿ ಎದುರಿಸಬಹುದಾದ ಅಪಾಯವನ್ನು ತಡೆಗಟ್ಟಬಹುದಾಗಿದೆ. ಹೂಡಿಕೆದಾರರಿಗೆ ಭೂಮಿಯ ಮಾಲೀಕತ್ವದ ನಿಖರತೆಯಿಂದ ಭೂಮಿಯ ಬಳಕೆಯನ್ನು ಹೆಚ್ಚಿನ ರೀತಿಯಲ್ಲಿ ಉತ್ತಮವಾಗಿ ಬಳಸಲು ಸಹಾಯಕವಾಗಿರುತ್ತದೆ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ವಿವೇಕಾನಂದ, ಭೂ ಮಾಪನ ಇಲಾಖೆಯ ಉಪ ನಿರ್ದೇಶಕಿ ಜಿ.ಸೀಮಂತಿನಿ, ಡಿಡಿಎಆರ್ ಇಲಾಖೆಯ ರಮ್ಯಾ, ಬೋಗಾದಿ ಮುಖ್ಯಾಧಿಕಾರಿ ಬಸವರಾಜು, ನಗರ ಯೋಜನಾ ಅಧಿಕಾರಿ ಹಾಗೂ ಮತ್ತಿತರು ಉಪಸ್ಥಿತರಿದ್ದರು.