ಜಿಲ್ಲೆ

ಬೋಗಸ್ ಬಿಲ್ ಸೃಷ್ಟಿಸಿ ಹಣ ಕೊಳ್ಳೆಹೊಡೆಯಲು ಸಂಚು!?..

ಅರಸೀಕೆರೆ: ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಬಿಜೆಪಿ ವತಿಯಿಂದ ಭಾನುವಾರ ಶಾನೆಗೆರೆ ಹಾಗೂ ಪುರಲೇಹಳ್ಳಿ ಗ್ರಾಪಂ ವ್ಯಾಪ್ತಿಯ ಮಹಿಳೆಯರಿಗೆ ಆಯೋಜಿಸಿದ್ದ ಹರಿಶಿಣ,ಕುಂಕುಮ, ಮಡಿಲಕ್ಕಿ ಬಾಗಿನ ಸಮರ್ಪಣೆ ಕಾರ್ಯಕ್ರಮಕ್ಕೆ ಮುಖಂಡ ಎನ್.ಆರ್.ಸಂತೋಷ್ ಜೋಡೆತ್ತಿನ ಗಾಡಿ ಓಡಿಸುವ ಮೂಲಕ ಚಾಲನೆ ನೀಡಿದರು.ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ನೆರದಿದ್ದ ಭಾರಿ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಎನ್.ಆರ್.ಸಂತೋಷ್, ಜಲಜೀವನ್ ಮಿಷನ್(ಜೆಜೆಎಂ), ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಮಹಿಳಾ ಸಬಲೀಕರಣಕ್ಕೆ ಮುದ್ರಾ ಯೋಜನೆ ಅನುಷ್ಠಾನ, ನಗರೋತ್ಥಾನ,ಎತ್ತಿನಹೊಳೆ, ಸೇರಿ ವಿವಿಧ ಇಲಾಖೆಗಳಿಗೆ ಹಿಂದೆಂದೂ ಕಂಡರಿಯದಷ್ಟು ಅನುದಾನವನ್ನು ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಡಬಲ್ ಇಂಜಿನ್ ಸರ್ಕಾರಗಳು ಕ್ಷೇತ್ರಕ್ಕೆ ಕೊಟ್ಟಿವೆ.ವಾಸ್ತವ ಮರೆಮಾಚಲು ಹೊರಟಿರುವ ಇಲ್ಲಿನ ಶಾಸಕರೊಬ್ಬರು ಸ್ವಯಂ ಭಗೀರಥನೆಂದು ಹೇಳಿಕೊಳ್ಳುವ ಮೂಲಕ ಪ್ರಬುದ್ಧ ಮತದಾರರ ಕಣ್ಣಿಗೆ ಮಣ್ಣೆರಚಲು ಹೊರಟಿದ್ದಾರೆ.17 ತೆಂಗಿನ ಮರವಿದ್ದ ವ್ಯಕ್ತಿ ನೂರಾರು ಕೋಟಿ ರೂ.ಆಸ್ತಿ ಮಾಡಲು ಹೇಗೆ ಸಾಧ್ಯ. ಇವರೇನು ಅಂಬಾನಿ, ಇನ್ಪೋಸಿಸ್ ನಾರಾಯಣಮೂರ್ತಿಯವರೇ ನೀವೆ ಹೇಳಿ ಎಂದು ವಾಗ್ದಾಳಿ ನಡೆಸಿದರು.

ಗ್ರಾಮಗಳ ಅಭಿವೃದ್ಧಿ ಮನಗಂಡು ಕ್ಷೇತ್ರದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಉಭಯ ಸರ್ಕಾರಗಳಿಂದ ದೊಡ್ಡಮಟ್ಟದ ಅನುದಾನ ಹರಿದುಬಂದಿದೆ. ಇದಕ್ಕೆ ಪೂರಕ ಎನ್ನುವಂತೆ ಹಾರೆ, ಗುದ್ದಲಿ ಹಿಡಿದು ತನ್ನದೇ ಅನುದಾನವೆಂಬಂತೆ ಪಕ್ಷ ತೊರೆಯಲು ಹೊರಟಿರುವ ವ್ಯಕ್ತಿ ಬಿಂಬಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಯಾವ ಇಲಾಖೆಗೆ ಎಷ್ಟು ಅನುದಾನ ಬಂದಿದೆ ಎಂದು ಪ್ರಶ್ನಿಸದಿದ್ದರೆ ಬೋಗಸ್ ಬಿಲ್ ಸೃಷ್ಟಿಸಿ ಹಣ ಕೊಳ್ಳೆಹೊಡೆಯಲು ಸಂಚು ರೂಪಿಸಿದ್ದು ನಾಗರಿಕರು ಜನರು ಜಾಗೃತರಾಗಬೇಕಿದೆ ಎಂದು ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದರು.

ಬದಲಾವಣೆ ಜಗದ ನಿಯಮ ಎನ್ನವ ಸಮಯ ಸನ್ನಿಹಿತವಾಗಿದ್ದು ಮಹಿಳೆಯರಿಗೆ ಬಾಗಿನ, ಹರಿಶಿಣ, ಕುಂಕುಮ ,ಮಡಿಲಕ್ಕಿ ನೀಡುವುದನ್ನು ಕೈಬಿಡುವಂತೆ ಒತ್ತಡ ಹಾಕುತ್ತಿದ್ದಾರೆ. 15 ವರ್ಷದ ಅಧಿಕಾರದ ಅವಧಿಯಲ್ಲಿ ಇಂತಹ ಕೆಲಸ ಮಾಡಿದ್ದರೆ ಹೇಳಲಿ.ಮೂರು ಬಾರಿ ಒಬ್ಬರಿಗೆ ಅವಕಾಶ ಮಾಡಿದ್ದೀರಿ ನನಗೊಮ್ಮೆ ಆಶಿರ್ವದಿಸಿ.ಅಧಿಕಾರವಿಲ್ಲದಿದ್ದರೂ ಜನಪರ ಕೆಲಸ ಮಾಡುತ್ತಿದ್ದು, ಶಿಕ್ಷಣ, ಆರೋಗ್ಯ, ಉದ್ಯೋಗ ಸೃಷ್ಟಿ ಸೇರಿ ಎಲ್ಲ ಜನಪರ ಕೆಲಸ ಮಾಡಲಿದ್ದೇನೆ ಎಂದು ಭರವಸೆ ನೀಡಿದರು.

ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಜಯರಾಮ್ ಮಾತನಾಡಿ, ಶಾಸಕ ಕೆ.ಎಂ.ಶಿವಲಿಂಗೇಗೌಡ ಕೇಂದ್ರ
ಸರ್ಕಾರದ ಅಧಿಕಾರದ ವಿಕೇಂದ್ರಿಕರಣಕ್ಕೆ ಕತ್ತರಿ ಹಾಕಲು ಹೊರಟಿದ್ದಾರೆ. ಅನುದಾನ ಹಂಚಿಕೆ, ಕ್ರಿಯಾಯೋಜನೆ ತಯಾರಿ ಸೇರಿ ಎಲ್ಲ ವಿಷಯಗಳಲ್ಲೂ ಮೂಗು ತೂರಿಸವ ಕೆಲಸ ಮಾಡುತ್ತಿರುವುದು ಖಂಡನೀಯ. ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿ ಕೊರತೆಯಿಂದ ಬೇರು ಬಿಟ್ಟಿದ್ದ ಶಾಸಕರಿಗೆ ಪಂಚೆ ಒದ್ದೆಯಾಗುವ ಕಾಲ ಹತ್ತಿರ ಬಂದಿದೆ ಎಂದು ಲೇವಡಿ ಮಾಡಿದರು.

ನಗರಸಭೆ ಅಧ್ಯಕ್ಷ ಸಿ.ಗಿರಿಶ್ ಮಾತನಾಡಿ,ನಗರದ ಬಹುತೇಕ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಕೋಮುವಾದ ನೀತಿ ಹೊಂದಿರುವ ಬಲಗೈ ಬಂಟನೊಬ್ಬನನ್ನು ಹಣ ಲೂಟಿ ಹೊಡೆಯಲು ಬಿಟ್ಟಿದ್ದಾರೆ.ಜತೆಗೆ ನಮ್ಮಲ್ಲಿ ಒಗ್ಗಟ್ಟಿನ ಕೊರತೆಯನ್ನು ಬಂಡವಾಳ ಮಾಡಿಕೊಂಡಿರುವ ಶಾಸಕರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದು ಇದಕ್ಕಾಗಿ ಕೆಲವೇ ಕೆಲವರನ್ನು ಗುರಾಣಿಯಂತೆ ಬಳಕೆ ಮಾಡುತ್ತಿರುವುದು ಜಗಜ್ಜಾಹಿರಾಗಿದೆ. ಇಂತಹ ವಿಕೃತಿ ಇಬ್ಬಗೆಯ ನೀತಿ ಹೊಂದಿರುವವರಿಗೆ ತಕ್ಕಪಾಠ ಕಲಿಸುವ ಸಮಯ ಹತ್ತಿರವಾಗಿದ್ದು ಕ್ಷೇತ್ರದ ಮತದಾರರು ಜಾಗೃತರಾಗಬೇಕು ಎಂದು ಉತ್ಸಾಹ ತುಂಬಿದರು.ತಾಪಂ ಮಾಜಿ ಸದಸ್ಯ ಭೋಜಾ ನಾಯ್ಕ ಮಾತನಾಡಿ, ತಿನ್ನುಣ್ಣುವವರು, ತಿನ್ನದವರು,ಲಿಂಗಾಯಿತರು, ಇತರೆಯವರು ಎಂದು ಇಬ್ಭಾಗ ಮಾಡುವ ಹಂತಕ್ಕೆ ಇಳಿದಿರುವುದು ಖಂಡನೀಯ.ನಮ್ಮೂರಿನ ಎರಡು ದೇವಾಲಯ ಕೆಡವಿದ್ದು ಇವರ ಸಾಧನೆ ಎಂದು ಶಿವಲಿಂಗೇಗೌಡರ ನಡೆ ವಿರುದ್ಧ ಕಿಡಿಕಾರಿದರು.ಒಬಿಸಿ ಮುಖಂಡ ವೈ.ಕೆ.ದೇವರಾಜ್,ಚಿಕ್ಕಮ್ಮನಹಳ್ಳಿ ನಾಗರಾಜ್,ಗ್ರಾಪಂ ಸದಸ್ಯೆ ರುಕ್ಮಿಣಿ ಬಾಯಿ, ದೇವಮ್ಮ, ಶಿವಿಬಾಯಿ, ಚಂದ್ರಪ್ಪ, ನಟರಾಜ್, ಲತಾ, ಬಸವರಾಜಪುರ ಮೂರ್ತಣ್ಣ,ಮಂಜುನಾಥ್, ಗಂಜಿಗೆರೆ ಅಶೋಕ್, ರಘು, ಶಾನೆಗೆರೆ ಮಂಜು, ದೀಪು ಇನ್ನಿತರರು ವೇದಿಕೆಯಲ್ಲಿದ್ದರು.