ಯಲ್ಲಾಪುರ: ತಾಪಂ ನೂತನ ಅಧ್ಯಕ್ಷೆ ಚಂದ್ರಕಲಾ ಭಟ್ಟ ಅವರು ಇಲ್ಲಿನ ತಾಲೂಕು ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ನಂತರ ಅಧಿಕಾರಿಗಳಿಂದ ಕರೊನಾ ಚಿಕಿತ್ಸೆಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಪಡೆದರು.
ಆಸ್ಪತ್ರೆಯಲ್ಲಿ ನೀರಿನ ಸೌಲಭ್ಯಕ್ಕಾಗಿ ಬೋರ್ವೆಲ್ ಅಗತ್ಯವಿರುವ ಕುರಿತು ಅಧಿಕಾರಿಗಳು ಪ್ರಸ್ತಾಪಿಸಿದಾಗ ತಕ್ಷಣ ತಾ.ಪಂ. ಅನುದಾನದಿಂದ ಬೋರ್ವೆಲ್ ಮಂಜೂರಿ ಮಾಡಿ, ಎರಡು ದಿವಸಗಳೊಳಗೆ ಕಾಮಗಾರಿ ನಡೆಸಲು ಸೂಚಿಸಿದರು.
ನಂದೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾರದಲ್ಲಿ ಎರಡು ದಿನವಾದರೂ ಈ ಹಿಂದೆ ಕಾರ್ಯನಿರ್ವಹಿಸಿದ ಡಾ. ಪ್ರಸನ್ನ ಫಾಯದೆ ಅವರನ್ನು ನಿಯೋಜಿಸುವಂತೆ ಸಾರ್ವಜನಿಕರ ಆಗ್ರಹವಿದೆ ಎಂದು ತಾ.ಪಂ. ಸದಸ್ಯ ನಾಗರಾಜ ಕವಡಿಕೆರೆ ಮನವಿ ಮಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ, ಆಡಳಿತ ವೈದ್ಯಾಧಿಕಾರಿ ಡಾ. ರಾಮಾ ಹೆಗಡೆ, ಡಾ.ಗೀತಾ, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ. ಭಟ್ಟ, ತಾ.ಪಂ. ಸದಸ್ಯ ನಟರಾಜ ಗೌಡರ್, ತಾ.ಪಂ. ಮಾಜಿ ಅಧ್ಯಕ್ಷ ರವಿ ಕೈಟ್ಕರ್ ಇತರರಿದ್ದರು.