ಗುಂಡ್ಲುಪೇಟೆ: ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಬೊಮ್ಮಲಾಪುರದ ರಸ್ತೆ ಬದಿಯ ಎಲ್ಲೆಂದರಲ್ಲಿ ಕಸದ ರಾಶಿ ಹೆಚ್ಚಾಗಿದ್ದು, ಅಶುಚಿತ್ವ ತಾಂಡವವಾಡುತ್ತಿದೆ.
ಗ್ರಾಮ ಪಂಚಾಯಿತಿ ಕೇಂದ್ರವೂ ಆದ ಗ್ರಾಮದಲ್ಲಿ ಬ್ಯಾಂಕ್, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಚೆ ಕಚೇರಿ, ಕೃಷಿ ಪತ್ತಿನ ಸಹಕಾರ ಸಂಘ, ಕಾನ್ವೆಂಟ್, ಪ್ರಾಥಮಿಕ ಹಾಗೂ ಪ್ರೌಢಶಾಲೆಯಿದ್ದು, ಅಕ್ಕಪಕ್ಕದ ಊರುಗಳಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೆಲಸ ಕಾರ್ಯಗಳಿಗಾಗಿ ಬರುತ್ತಾರೆ. ಸುತ್ತಮುತ್ತಲಿನ ಕಾಡಂಚಿನ ಹತ್ತಾರು ಗ್ರಾಮಗಳಿಗೆ ಇದು ಕೇಂದ್ರ ಸ್ಥಾನವೂ ಆಗಿದೆ. ಹೀಗಾಗಿ, ಇಲ್ಲಿ ಜನರ ಓಡಾಟ ಹೆಚ್ಚಾಗಿಯೇ ಇದೆ. ಆದರೆ ಗ್ರಾಮದಲ್ಲಿ ಕಸದ ರಾಶಿಯಿಂದಾಗಿ ಅಶುಚಿತ್ವ ತಾಂಡವವಾಡುತ್ತಿದ್ದು, ಪರಿಣಾಮ ಸಾರ್ವಜನಿಕರು ಮೂಗುಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.
ಗ್ರಾಮದ ಎಲ್ಲ ಬೀದಿಗಳು ಇಕ್ಕಟ್ಟಿನಿಂದ ಕೂಡಿರುವುದರಿಂದ ಸಣ್ಣ ಬೀದಿಗಳಲ್ಲಿ ಕಸದ ತೊಟ್ಟಿಗಳನ್ನು ಅಳವಡಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನಿವಾಸಿಗಳು ತಮ್ಮ ಮನೆಯ ಕಸವನ್ನು ರಸ್ತೆ ಬದಿಯಲ್ಲಿಯೇ ಬಿಸಾಡುತ್ತಿದ್ದಾರೆ. ಇದು ಅನೈರ್ಮಲ್ಯಕ್ಕೆ ಕಾರಣವಾಗುತ್ತಿದ್ದು, ನಿವಾಸಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಗ್ರಾಮವು ತಗ್ಗು ಪ್ರದೇಶದಲ್ಲಿರುವ ಕಾರಣ ಆಸ್ಪತ್ರೆ, ಪ್ರಾಥಮಿಕ ಹಾಗೂ ಪ್ರೌಢಶಾಲೆ, ಬಸ್ ನಿಲ್ದಾಣದ ರಸ್ತೆ ಬದಿಯಲ್ಲಿ ರಾಶಿ ರಾಶಿ ಕಸ ಇದ್ದು, ಹಂದಿ ಮತ್ತು ನಾಯಿಗಳ ಆವಾಸ ತಾಣವಾಗಿ ಮಾರ್ಪಟ್ಟಿದೆ. ಬಹುತೇಕ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದು ಕೊಳಚೆನೀರು ಮಡುಗಟ್ಟಿ ನಿಂತು ಸೊಳ್ಳೆಗಳೂ ಹೆಚ್ಚಾಗಿವೆ. ಇಡೀ ಗ್ರಾಮವೇ ಅನೈರ್ಮಲ್ಯದಿಂದ ಕೂಡಿದ್ದು, ಗಬ್ಬುನಾರುತ್ತಿದೆ.
ಬಹುತೇಕ ಹಿಂದುಳಿದ ವರ್ಗಗಳ ಜನರೇ ನೆಲೆಸಿರುವ ಗ್ರಾಮದಲ್ಲಿ ಇಕ್ಕಟ್ಟಾದ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಇದೊಂದು ದೊಡ್ಡ ಗ್ರಾಮವಾಗಿದ್ದು, 3424 ಕುಟುಂಬ ಇದೆ. 6,318 ಜನಸಂಖ್ಯೆ ಇದ್ದು, ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಗ್ರಾಮ ಪಂಚಾಯಿತಿ ವತಿಯಿಂದ 1994ರಲ್ಲಿಯೇ ವಸತಿ ಯೋಜನೆಯಡಿ ಹಕ್ಕುಪತ್ರ ವಿತರಿಸಲಾಗಿದೆಯಾದರೂ ನಿವೇಶನಗಳನ್ನು ಗುರುತಿಸಿ ನೀಡುವಲ್ಲಿ ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದರು. ಪರಿಣಾಮ ಹಕ್ಕುಪತ್ರ ಹೊಂದಿದವರು ಹೊಸದಾಗಿ ಮನೆಗಳನ್ನು ಕಟ್ಟಿಕೊಳ್ಳಲು ಸಾಧ್ಯವಾಗದೆ ಸಣ್ಣ ಮನೆಗಳಲ್ಲಿಯೇ ವಾಸಿಸುವಂತಾಗಿದೆ. ಈ ನಡುವೆ ಇತ್ತೀಚೆಗೆ ನಿವೇಶನಗಳನ್ನು ಗುರುತಿಸಿ ಹಂಚಿಕೆ ಮಾಡಿಕೊಟ್ಟಿದ್ದರೂ ಕೆಲವರು ಮಾತ್ರ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ವಸತಿ ಯೋಜನೆಯಡಿ ಬಿಲ್ ಆಗದ ಪರಿಣಾಮ ಫಲಾನುಭವಿಗಳು ಮನೆಗಳ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ಹಳೇ ಮನೆಯಲ್ಲಿಯೇ ವಾಸಿಸುತ್ತಿದ್ದಾರೆ.
ಪ್ರಮುಖ ಗ್ರಾಮ ಪಂಚಾಯಿತಿ ಕೇಂದ್ರವಾದರೂ ಗಣನೀಯ ಆದಾಯವಿಲ್ಲದ ಪಂಚಾಯಿತಿಯಲ್ಲಿ ಕಸ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಿಂದುಳಿದ ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಗ್ರಾಮದಲ್ಲಿ ತೆರಿಗೆ ಸಂಗ್ರಹವೂ ಉತ್ತಮವಾಗಿಲ್ಲ. ಇರುವ ಮೂರು ವಾಣಿಜ್ಯ ಮಳಿಗೆಗಳಿಂದ ಮಾಸಿಕ 7 ಸಾವಿರ ರೂ.ಬಾಡಿಗೆ ಬರುತ್ತಿದೆ. ವರ್ಷಕ್ಕೆ ಎರಡು ಬಾರಿ ಎಲ್ಲ ಬೀದಿಗಳಲ್ಲಿರುವ ಚರಂಡಿಯಲ್ಲಿನ ಹೂಳನ್ನು ಹೊರತೆಗೆಸಲಾಗುತ್ತದೆ. ಕಸ ವಿಲೇವಾರಿ ಘಟಕ ಇಲ್ಲದ ಪರಿಣಾಮ ಗ್ರಾಮದ ಹೊರವಲಯದಲ್ಲಿ ಸುರಿಯಲಾಗುತ್ತದೆ. ಕಸದ ತೊಟ್ಟಿಗಳನ್ನು ಅಳವಡಿಸದ ಪರಿಣಾಮ ಜನರು ತಮ್ಮ ಮನೆಯ ಕಸವನ್ನು ಮಾಮೂಲಿನಂತೆ ಬಿಸಾಡುತ್ತಿರುವುದು ಅನೈರ್ಮಲ್ಯಕ್ಕೆ ಕಾರಣವಾಗಿದೆ.
ಪೌರಕಾರ್ಮಿಕರ ಕೊರತೆಯಿಂದ ಪ್ರತಿದಿನವೂ ಬೀದಿಗಳಲ್ಲಿನ ಕಸವನ್ನು ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ. ಆರು ತಿಂಗಳಿಗೊಮ್ಮೆ ಎಲ್ಲ ಚರಂಡಿಗಳಲ್ಲಿನ ಹೂಳು ತೆಗೆಸಲಾಗುತ್ತದೆ. ಸಣ್ಣ-ಸಣ್ಣ ಬೀದಿಗಳಲ್ಲಿ ಕಸದ ತೊಟ್ಟಿಗಳನ್ನು ಅಳವಡಿಸಲು ಸಾಧ್ಯವಾಗಿಲ್ಲ. ಆದರೂ ನಿವಾಸಿಗಳು ರಸ್ತೆ ಬದಿಗಳಲ್ಲಿ ಕಸ ಬಿಸಾಡುತ್ತಿದ್ದಾರೆ. ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವ ಸಂಬಂಧ ಬೇಡಿಕೆ ಇಟ್ಟಿದ್ದರೂ ಇನ್ನೂ ಮಂಜೂರಾಗಿಲ್ಲ. ಪರಿಣಾಮ ಗ್ರಾಮದಲ್ಲಿ ಸ್ವಚ್ಛತೆ ನಿರ್ವಹಣೆ ಸಮಸ್ಯೆಯಾಗುತ್ತಿದೆ.
ರಶಿಯಾಬಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ