ಚನ್ನರಾಯಪಟ್ಟಣ: ಜನವಸತಿ ಪ್ರದೇಶದ ಸಮೀಪದಲ್ಲಿರುವ ಸರ್ಕಾರಿ ಗುಂಡುತೋಪಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಮುಂದಾಗಿರುವುದಕ್ಕೆ ಚನ್ನರಾಯಪಟ್ಟಣ, ಯಲಿಯೂರು ಗ್ರಾಪಂ ವ್ಯಾಪ್ತಿಯ ಬೊಮ್ಮನಹಳ್ಳಿ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದ್ದು ಶನಿವಾರ ಪ್ರತಿಭಟನೆ ನಡೆಸಿದರು.
ಬೊಮ್ಮನಹಳ್ಳಿ ಸರ್ವೇ ನಂ.19 ರಲ್ಲಿ ಸರ್ಕಾರಿ ಗುಂಡುತೋಪು ಇದೆ. ತುಂಬಾ ಹಿಂದಿನಿಂದ ಈ ಜಾಗ ಜಾತ್ರೆ ಮಹೋತ್ಸವ ಆಯೋಜನೆಗೆ ಬಳಕೆಯಾಗುತ್ತಿದೆ. ಆದ್ದರಿಂದ, ಈ ಜಾಗದ ಬಗ್ಗೆ ಭಾವನಾತ್ಮಕ ನಂಟು ಬೆಳೆದಿದೆ. ಇಲ್ಲಿ ಘಟಕ ಸ್ಥಾಪನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಆದ್ದರಿಂದ, ಈ ಜಾಗ ಬಿಟ್ಟು ಬೇರೆಡೆ ಘಟಕ ಸ್ಥಾಪಿಸಲಿ ಎಂದು ಆಗ್ರಹಿಸಿದರು.
ಈ ಭಾಗದಲ್ಲಿ ನಾಯಕ ಸಮುದಾಯದವರು ಹೆಚ್ಚಿದ್ದಾರೆ. ಗ್ರಾಮಸ್ಥರ ಗಮನಕ್ಕೆ ತರದೆ ಕಂದಾಯ ಅಧಿಕಾರಿಗಳು ಗುಂಡುತೋಪಿನ ಜಾಗವನ್ನು ಕಸ ವಿಲೇವಾರಿ ಘಟಕಕ್ಕೆ ಮಂಜೂರು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೀರಣ್ಣ ದೇವರ ವಿಗ್ರಹ ಮಾಯ: ತ್ಯಾಜ್ಯ ಘಟಕ ಸ್ಥಾಪನೆಗೆ ನಿಗದಿಪಡಿಸಿರುವ ಜಾಗದಲ್ಲಿ ವೀರಣ್ಣ ದೇವರ ಪುರಾತನ ದೇವಾಲಯವಿತ್ತು. ದೇವಾಲಯವನ್ನು ಜೀರ್ಣೋದ್ಧಾರ ಮಾಡಿ, ಅಲ್ಲಿ ಅಂಬೇಡ್ಕರ್ ಹಾಗೂ ವಾಲ್ಮೀಕಿ ಭವನ ನಿರ್ಮಿಸಲು ಚಿಂತನೆ ನಡೆಸಿದ್ದೆವು. ಇದಕ್ಕಾಗಿ ಅಂಬೇಡ್ಕರ್ ಬ್ಯಾನರ್ ಕಟ್ಟಿದ್ದೆವು. ಆದರೆ, ರಾತ್ರೋರಾತ್ರಿ ಕಿತ್ತು ಹಾಕಲಾಗಿದೆ. ಇಲ್ಲಿದ್ದ ವೀರಣ್ಣ ದೇವರ ವಿಗ್ರಹವನ್ನು ಎತ್ತಂಗಡಿ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ತಾಪಂ ಇಒ ಅವರಿಗೆ ದೂರು ನೀಡಿದ್ದರೂ ಸ್ಪಂದಿಸಿಲ್ಲ. ಯಾವುದೇ ಕಾರಣಕ್ಕೂ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ಪೊಲೀಸರೂ ವಿನಾಕಾರಣ ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಗ್ರಾಮದ ನಿವಾಸಿ ಚನ್ನಕೇಶವ ಆರೋಪಿಸಿದರು.
ಗ್ರಾಮಸ್ಥರಾದ ಶ್ರೀನಿವಾಸ್, ಚಿನ್ನಪ್ಪ, ನಾರಾಯಣಸ್ವಾಮಿ, ಕೃಷ್ಣಪ್ಪ, ಮಂಜುನಾಥ್, ತಿಪ್ಪಯ್ಯ, ಲಕ್ಷ್ಮಮ್ಮ, ಯಶೋಧಮ್ಮ, ನಾಗಮ್ಮ, ಸರೋಜಮ್ಮ, ಅನಿಲ್, ಕೃಷ್ಣ, ಪಿಳ್ಳಪ್ಪ, ನಾರಾಯಣಸ್ವಾಮಿ, ವೆಂಕಟೇಶಪ್ಪ ಪ್ರತಿಭಟನೆಯಲ್ಲಿ ಇದ್ದರು.
ಕಂದಾಯ ಇಲಾಖೆಯವರು ಭೂಮಿ ಮಂಜೂರು ಮಾಡಿದ್ದಾರೆ. ಇದಕ್ಕೂ ನಮಗೂ ಸಂಬಂಧವಿಲ್ಲ. ಬೊಮ್ಮನಹಳ್ಳಿ ಸರ್ವೇ ನಂ.19ರಲ್ಲಿ ಎಕರೆ ಭೂಮಿ ಇದ್ದು, ಅದರಲ್ಲಿ 15 ಗುಂಟೆ ತ್ಯಾಜ್ಯ ಘಟಕಕ್ಕೆ ಮಂಜೂರಾಗಿದೆ. ಪಹಣಿ, ನಕ್ಷೆ ಎಲ್ಲ ಆಗಿದೆ. ಆದರೆ ಈಗ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲಿದ್ದ ದೇವರ ಮೂರ್ತಿ ಎತ್ತಿಕೊಂಡು ಹೋಗಿದ್ದಾರೆ ಎಂಬುದು ವೃಥಾ ಆರೋಪ ಆಗಿದೆ. ಮಂಜುನಾಥ್, ಪಿಡಿಒ