ಹೊಳಲ್ಕೆರೆ: ತಾಲೂಕಿನ ಬೊಮ್ಮನಕಟ್ಟೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಅವ್ಯವಸ್ಥೆ ಖಂಡಿಸಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಳಗಿನ ಉಪಾಹಾರ ತ್ಯಜಿಸಿ ಮಂಗಳವಾರ ಹಾಸ್ಟೆಲ್ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದರು.
ನಂತರ ಶಾಸಕ ಡಾ.ಎಂ.ಚಂದ್ರಪ್ಪ ಇವರ ಬಳಿ ತಮ್ಮ ಅಳಲು ತೋಡಿಕೊಂಡರು. ದಿನನಿತ್ಯದ ಮೆನುವಿನ ಪ್ರಕಾರ ಊಟ ಕೊಡುತ್ತಿಲ್ಲ. ಕೊಳೆತ ತರಕಾರಿ ಬಳಸಿ ಅಡುಗೆ ಮಾಡುತ್ತಿದ್ದಾರೆ. ಬಿಸಿ ನೀರಿನ ವ್ಯವಸ್ಥೆ ಇಲ್ಲ.
ಸರ್ಕಾರದಿಂದ ಬರುವಂತಹ ವಿಟಮಿನ್ ಟ್ಯಾಬ್ಲೆಟ್‌ಗಳನ್ನು ನೀಡುತ್ತಿಲ್ಲ. ನಾವು ದಿನನಿತ್ಯ ಬರೀ ಅನ್ನ ತಿಂದು ಆರೋಗ್ಯದಲ್ಲಿ ಏರುಪೇರಾಗಿದೆ. ಚಿಕ್ಕ ವಯಸ್ಸಿಗೆ ಸಕ್ಕರೆ ಕಾಯಿಲೆ ಉಂಟಾಗಿದೆ.
ಪೌಷ್ಟಿಕಾಂಶಯುಕ್ತ ಆಹಾರ ಸೇವಿಸದೆ ತಲೆಸುತ್ತು ಬರುತ್ತಿದೆ ಎಂದು ವಿದ್ಯಾರ್ಥಿಗಳು ಶಾಸಕರ ಬಳಿ ತಮ್ಮ ಅಳಲು ತೋಡಿಕೊಂಡರು.
ನಿಯಮಿತವಾಗಿ ಪೋಷಕರ ಸಭೆ ಕರೆಯುವುದಿಲ್ಲ. ವಸತಿ ಶಾಲೆಗೆ ಪ್ರಿನ್ಸಿಪಾಲ್ ಮತ್ತು ವಾರ್ಡನ್ ಒಬ್ಬರೇ ಆಗಿದ್ದಾರೆ. ಸುಮಾರು 250 ವಿದ್ಯಾರ್ಥಿಗಳಿಗೆ ಊಟ ನಿರ್ವಹಣೆ ಮಾಡಲು ಕೇವಲ ಇಬ್ಬರು ಭಟ್ಟರು ಮತ್ತು ಸಹಾಯಕರು ಮಾತ್ರ ಇದ್ದಾರೆ.
ಉಳಿದ ಐದು ಜನ ರಜಾ ಹಾಕಿದ್ದಾರೆ. ಅಲ್ಲದೆ ನಾನು ಶಾಸಕ ಎಂ.ಚಂದ್ರಪ್ಪನವರ ಸಂಬಂಧಿಕ ಎಂದು ಪ್ರಿನ್ಸಿಪಾಲ್ ಮಂಜುನಾಥ್ ಹೇಳುತ್ತಿದ್ದಾರೆ. ನಮ್ಮ ಸಮಸ್ಯೆ ಕೇಳಲು ಇದೂವರೆಗೂ ಯಾವ ಅಧಿಕಾರಿಯೂ ಬಂದಿಲ್ಲ.
ಈ ಕೂಡಲೇ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ವಾರ್ಡನ್ ಬದಲಾಯಿಸಬೇಕು ಎಂದು ಪಟ್ಟುಹಿಡಿದರು.
ಮುಂದಿನ ದಿನಗಳಲ್ಲಿ ನಮಗೆ ಸರಿಯಾದ ರೀತಿಯಲ್ಲಿ ಊಟ ಒದಗಿಸಿಕೊಡಬೇಕು. ಇಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.