ಜಿಲ್ಲೆ

ಬೊಮ್ಮಕ್ಕನಹಳ್ಳಿಯಲ್ಲಿ ದಂಪತಿ ಬರ್ಬರ ಹತ್ಯೆ

ಚಿತ್ರದುರ್ಗ: ತಾಲೂಕಿನ ಬೊಮ್ಮಕ್ಕನಹಳ್ಳಿಯಲ್ಲಿ ಗುರುವಾರ ಸಂಜೆ ದಂಪತಿಯ ಕೊಲೆಯಾಗಿದ್ದು, ಗ್ರಾಮದ ಹನುಮಂತಪ್ಪ (48), ಅವರ ಪತ್ನಿ ತಿಪ್ಪಮ್ಮ (45) ಮೃತರು. ಅವರ ಜಮೀನಿನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಈ ಸಂಬಂಧ ಮೃತರ ಪುತ್ರಿ ಹರ್ಷಿತಾ, ತನ್ನ ಪತಿ ಮಂಜುನಾಥ ಮತ್ತು ಆತನ ಸಂಬಂಧಿಕರ ವಿರುದ್ಧ ತುರುವನೂರು ಠಾಣೆಗೆ ದೂರು ನೀಡಿದ್ದಾಳೆ.
ಒಂದು ವರ್ಷದ ಹಿಂದೆ ಮಂಜುನಾಥ್ ಜತೆ ಹರ್ಷಿತಾಳ ಮದುವೆಯಾಗಿತ್ತು. ಮದುವೆಯಾದಾಗಿನಿಂದಲೂ ನಿತ್ಯ ಕುಡಿದು ಬಂದು ನನಗೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದ. ಈ ವಿಚಾರದಲ್ಲಿ ಗಂಡನ ಮನೆ ಮತ್ತು ತವರಿನವರ ನಡುವೆ ಗಲಾಟೆಯಾಗಿತ್ತು. ಒಂದೂವರೆ ತಿಂಗಳ ಹಿಂದೆ ಮತ್ತೆ ನನ್ನ ಗಂಡ ನನಗೆ ಹೊಡೆದು ನನ್ನೊಂದಿಗೆ ಜಗಳ ಮಾಡಿದ್ದ. ಈ ಹಿನ್ನೆಲೆಯಲ್ಲಿ ತಾಯಿ ನನ್ನನ್ನು ತವರು ಮನೆಗೆ ಕರೆದುಕೊಂಡು ಬಂದಿದ್ದರು.
ಇದೇ ದ್ವೇಷದಿಂದ ಜಮೀನಿಗೆ ತೆರಳಿದ್ದ ತಂದೆ-ತಾಯಿಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಪತಿ ಮಂಜುನಾಥ್, ಮಾವ ಚಂದ್ರಪ್ಪ, ಮೈದುನ ರಘು, ಸಂಬಂಧಿ ಮಲ್ಲಿಕಾರ್ಜುನ್ ಮತ್ತಿತರ ವಿರುದ್ಧ ದೂರು ನೀಡಿದ್ದಾಳೆ.
ಸ್ಥಳಕ್ಕೆ ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಡಿವೈಎಸ್ಪಿ ದಿನಕರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತುರುವನೂರು ಠಾಣೆ ಪಿಐ ಬಿ.ಕೆ.ಲತಾ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.