ಜಿಲ್ಲೆ

ಬೈಲಹೊಂಗಲ ಚನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕವಾಗಿಸಿ

ಕಲಬುರಗಿ: ಬೈಲಹೊಂಗಲದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಸಮಾಧಿ ಪ್ರದೇಶವನ್ನು ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ್ ಕೊಡಲಹಂಗರಗಾ ಆಗ್ರಹಿಸಿದರು.

ಕಲಬುರಗಿ ವೀರಶೈವ ಕಲ್ಯಾಣ ಮಂಟಪದಲ್ಲಿ ಸಮಾಜದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಣಿ ಚನ್ನಮ್ಮ ಅವರು ಲಿಂಗಾಯತ ಸಮಾಜದ, ಕನ್ನಡ ನಾಡಿನ ರಾಷ್ಟ ಪ್ರೇಮಿ, ದಿಟ್ಟ ಹೋರಾಟಗಾರ್ತಿ. ಇಂದಿನ ಮಹಿಳೆಯರಿಗೆ ಚನ್ನಮ್ಮ ಸ್ಪೂರ್ತಿ. ರಾಷ್ಟಪ್ರೇಮದ ಪ್ರತೀಕವೂ ಆಗಿದ್ದಾರೆ. ಹೀಗಾಗಿ ಬೈಲಹೊಂಗಲದಲ್ಲಿ ಚನ್ನಮ್ಮ ಸಮಾದಿ ಪ್ರದೇಶವನ್ನು ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿಪಡಿಸಬೇಕು ಎಂದರು.

ವಿ.ಜಿ.ಮಹಿಳಾ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ಶೀವಲೀಲಾ ಧೋತ್ರೆ, ಉಪ ಮಹಾಪೌರ ಶಿವಾನಂದ ಪಿಸ್ತಿ, ಕೆಕೆಐಸಿಸಿ ಅಧ್ಯಕ್ಷ ಶಶಿಕಾಂತ ಪಾಟೀಲ್, ಕಲ್ಯಾಣಪ್ಪ ಪಾಟೀಲ್ ಮಳಖೇಡ, ಸುಭಾಷ ಬಿಜಾಪುರೆ ಮಾತನಾಡಿದರು. ಗದ್ದುಗೆ ಮಠದ ಪೂಜ್ಯ ಚರಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಸೂರ್ಯಕಾಂತ ಡುಮ್ಮಾ ಪ್ರಾರ್ಥಿಸಿದರು. ಪ್ರಾಧ್ಯಾಪಕಿ ಡಾ.ಅಮೃತಾ ಕಟಕೆ, ಸುರೇಖಾ ಮಲ್ಲಿಕಾರ್ಜುನ ಪಾಟೀಲ್ ಅವರನ್ನು ಸತ್ಕರಿಸಲಾಯಿತು.
ಸಮಾಜದ ಮುಖಂಡರಾದ ಸಂಗಮೇಶ ನಾಗನಳ್ಳಿ, ರಮೇಶ ಪಾಟೀಲ್, ರಮೇಶ ತಿಪನೂರ, ಚಂದ್ರಶೇಖರ ತಳ್ಳಳ್ಳಿ, ಡಾ.ಶ್ರೀಶೈಲ ಘೂಳಿ, ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ, ಜಗದೀಶ ಗತ್ತೇದಾರ, ಚನ್ನು ಲಿಂಗನವಾಡಿ, ಸುನೀಲ ಮಚ್ಚಟ್ಟಿ, ದಿಗಂಬರ ಮಾಗಣಗೇರಿ, ಮಲ್ಲು ಉದನೂರ, ರವಿ ಹಾಗರಗಿ, ಮಂಜು ಕಳಸಕರ್, ಸಚಿನ್ ಕಡಗಂಚಿ, ರಾಜಕುಮಾರ ಕೋಟಿ, ಜಗನ್ನಾಥ ಪಟ್ಟಣಶೆಟ್ಟಿ, ಶರಣು ಖಾನಾಪೂರ, ಶೀಲಾ ಮುತ್ತಿನ್, ಶ್ರೀದೇವಿ ಸಗಸನಗೇರಿ ಇತರರಿದ್ದರು.