ತಂಗಡಗಿ ಸಮೀಪದ ಬೈಲಕೂರ ಗ್ರಾಮದಲ್ಲಿ ಬೈಲಾದ್ರೇಶ್ವರ ಜಾತ್ರೆ ನಿಮಿತ್ತ ಓಕುಳಿಯ ಕೊಂಡ ತುಳುಕಿಸುವ ಭಾಗವಾಗಿ ಜಬರಿ, ಪಲ್ಲಕ್ಕಿ ಮೆರವಣಿಗೆ ನಡೆಯಿತು. 
ಜಿಲ್ಲೆ

ಬೈಲಕೂರ ಗ್ರಾಮದಲ್ಲಿ ಬೈಲಾದ್ರೇಶ್ವರನ ಜಾತ್ರೆ ಸಂಭ್ರಮ

ತಂಗಡಗಿ: ಸಮೀಪದ ಬೈಲಕೂರ ಗ್ರಾಮದಲ್ಲಿ ಯುಗಾದಿ ನಿಮಿತ್ತ ಮೂರು ದಿನಗಳವರೆಗೆ ಬೈಲಾದ್ರೇಶ್ವರನ ಜಾತ್ರೆ ವಿಜೃಂಭಣೆಯಿಂದ ಜರುಗಿತು.

ಬೈಲಾದ್ರೇಶ್ವರನ ಬೆಳ್ಳಿ ಮೂರ್ತಿ, ಕಲಶವನ್ನು ಗಂಗಸ್ಥಳಕ್ಕೆ ಮಂಗಳವಾರ ಕರೆದೊಯ್ದು ಮರಳಿ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಕರೆತರಲಾಯಿತು. ದೇವಾಲಯದ ಆವರಣದಲ್ಲಿ ಸಿಮೆಂಟ್‌ನಲ್ಲಿ ನಿರ್ಮಿಸಿರುವ 12 ಅಡಿ ಎತ್ತರದ ಬೈಲಾದ್ರೇಶ್ವರ ಎಂದೇ ಕರೆಯಲ್ಪಡುವ ಆಂಜನೇಯನ ಪುತ್ಥಳಿಯನ್ನು ಪಡೇಕನೂರ ದಾಸೋಹ ವಿರಕ್ತಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಚಬನೂರ ಹಿರೇಮಠದ ರಾಮಲಿಂಗ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು. ಅಂದೇ ರಾತ್ರಿ ದೇವಸ್ಥಾನದ ಎದುರಿಗೆ ಇರುವ ಕೊಂಡವನ್ನು ತುಂಬಿಸಲಾಯಿತು.

ಬೈಲಾದ್ರೇಶ್ವರನಿಗೆ ಬುಧವಾರ ಬೆಳಗ್ಗೆ ಎಲೆ, ಕುಂಕುಮ ಪೂಜೆ ನೆರವೇರಿಸಲಾಯಿತು. ಊರ ಗೌಡರ ಮನೆಯಿಂದ ಬಾಳೆಕಂಬ, ಅರ್ಚಕರ ಮನೆಯಿಂದ ಕಲಶವನ್ನು ಮೆರವಣಿಗೆ ಮೂಲಕ ತರಲಾಯಿತು. ಸಂಜೆ ಹುಡೇದಗಡ್ಡಿ ಲಕ್ಷ್ಮೀ ಗುಡಿಯಿಂದ ಸಕಲ ವಾದ್ಯಮೇಳದೊಂದಿಗೆ ಜಬರಿ ಮೆರವಣಿಗೆ ನಡೆಸಲಾಯಿತು.

ಹಡಗಲಿ ಗ್ರಾಮದಿಂದ ಚಾಜ ಬಂದ ನಂತರ ಬೈಲಾದ್ರೇಶ್ವರನ ಕೊಂಡ ತುಳುಕಿಸುವ, ಜಬರಿಯಿಂದ ಹೊಡೆಯುವ ಕಾರ್ಯಕ್ಕೆ ಚಾಲನೆ ದೊರಕಿತು. ಕೊಂಡ ತುಳಕಿಸಿದ ನೀರನ್ನು ಹೊಸ ಮಡಿಕೆಯಲ್ಲಿ ತುಂಬಿಕೊಂಡು ಭಕ್ತರ ಮೇಲೆ ಹಾಕಲಾಯಿತು. ಈ ಭಕ್ತರು ನೀರು ಹಾಕಿದವರಿಗೆ ಜಬರಿಯಿಂದ ಹೊಡೆದರು. ಓಕುಳಿ, ಜಬರಿಯಾಟದಲ್ಲಿ ಹಿಂದು- ಮುಸ್ಲಿಮರು ಸೇರಿ ಎಲ್ಲ ಜಾತಿ, ಧರ್ಮದವರು ಭಾಗವಹಿಸಿದ್ದರು.

ಮುದ್ದೇಬಿಹಾಳ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಬಿ.ಮಳಗೌಡರ, ಎ.ಎಸ್.ಕೋಟಿ, ಬಿ.ವಿ.ಕಂಠಿ, ಶಿವಣ್ಣ ಪಂಪಣ್ಣನವರ, ಬೈಲಾದ್ರೇಶ್ವರನ ಪ್ರಧಾನ ಅರ್ಚಕರಾದ ಸದಾನಂದ ಪೂಜಾರಿ, ಬಿಜೆಪಿ ಮುದ್ದೇಬಿಹಾಳ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಬಸವರಾಜ ಕುಂಬಾರ, ಸಿದ್ದನಗೌಡ ಪಾಟೀಲ, ಎಸ್.ಬಿ.ನಾರಗಲ್, ಬಾಪುರಾವ ದೇಸಾಯಿ, ಕೂಡ್ಲಪ್ಪ ಪಂಪಣ್ಣವರ, ಎಚ್.ಬಿ.ಮಳಗೌಡರ, ಮಂಜುನಾಥ ರತ್ನಾಕರ, ಯಮನೂರ ವಾಲಿಕಾರ, ಎಸ್.ವೈ.ಟಕ್ಕಳಕಿ, ಸಿ.ಬಿ.ಚಲವಾದಿ, ಖಾಜೇಸಾ ತಹಸೀಲ್ದಾರ್, ಮಹೇಶ ಪಂಪಣ್ಣವರ ಇತರರಿದ್ದರು.