ಜಿಲ್ಲೆ

ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ವಿರೋಧ, ಮಚ್ಚೇನಹಳ್ಳಿ ಗ್ರಾಮಸ್ಥರು, ಅಧಿಕಾರಿಗಳ ನಡುವೆ ಮಾತಿನ ಚಕಮಕಿ

ದೊಡ್ಡಬಳ್ಳಾಪುರ: ಎತ್ತಿನಹೊಳೆ ಯೋಜನೆ ಭಾಗವಾಗಿ ಸಾಸಲು ಹೋಬಳಿಯಲ್ಲಿ ನಿರ್ಮಾಣವಾಗಲಿರುವ ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಗಿದೆ.

ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಉದ್ದೇಶಿಸಿರುವ ಯೋಜನೆಯಲ್ಲಿ ಜಲಾಶಯ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಆಯ್ದ ಗ್ರಾಮಗಳಲ್ಲಿ ಸರ್ವೇ ಕಾರ್ಯ ಮತ್ತು ಜಿಯೋ ಟೆಕ್ನಿಕಲ್ ತನಿಖೆ ಮಾಡಲು ಉಪವಿಭಾಗಾಧಿಕಾರಿ ಅರುಳ್ ಕುಮಾರ್ ನೇತೃತ್ವದಲ್ಲಿ ಶನಿವಾರ ಮಚ್ಚೇನಹಳ್ಳಿಯಲ್ಲಿ ಅಧಿಕಾರಿಗಳು ಹಾಗೂ ಮುಖಂಡರ ಸಭೆ ಏರ್ಪಡಿಸಲಾಗಿತ್ತು.

ಜಲಾಶಯ ನಿರ್ಮಾಣಕ್ಕೆ ಸ್ಥಳೀಯರ ವಿರೋಧವಿದ್ದರೂ ಕದ್ದು ಮುಚ್ಚಿ ಸರ್ವೇ ಮಾಡುತ್ತಾರೆ. ಇಲ್ಲಿನ ಬಡ ಜನರ ಒಕ್ಕಲೆಬ್ಬಿಸಿ ನೀರು ಕೊಡುವ ಅವಶ್ಯಕತೆ ಇಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದಾಗ, ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಜಲಾಶಯ ನಿರ್ಮಾಣದಿಂದ ಹಲವು ಗ್ರಾಮಗಳು ಮುಳುಗಡೆ ಆಗಲಿವೆ. ಹೀಗಾಗಿ ಪೈಪ್‌ಲೈನ್ ಮೂಲಕ ನೀರು ತೆಗೆದುಕೊಂಡು ಹೋಗಿ ಎಂಬುದು ನಮ್ಮೆಲ್ಲರ ಒಕ್ಕೊರಲ ತೀರ್ಮಾನ. ಷಡ್ಯಂತ್ರ ನಡೆಸಿ ಬಲವಂತದಿಂದ ಜಲಾಶಯ ನಿರ್ಮಾಣಕ್ಕೆ ಮುಂದಾದಲ್ಲಿ ಗ್ರಾಮಸ್ಥರು ಉಗ್ರ ಹೋರಾಟ ಮಾಡಲಿದ್ದಾರೆ ಎಂದು ಸಾಸಲು ಗ್ರಾಪಂ ಸದಸ್ಯ ಗೋವಿಂದರಾಜ್ ಹೇಳಿದರು.

ಈ ವೇಳೆ ಮಾತನಾಡಿದ ಎತ್ತಿನಹೊಳೆ ಯೋಜನೆ ಇಂಜಿನಿಯರ್ ಶ್ರೀಕಾಂತ್, ಯೋಜನೆ ಕಾರ್ಯ ಶೇ.50 ಪೂರ್ಣವಾಗಿದೆ. ಕೊರಟಗೆರೆ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಪರಿಹಾರ ವ್ಯತ್ಯಾಸವಿರುವುದರಿಂದ ಮರು ಸರ್ವೇ ಕಾರ್ಯಕ್ಕೆ ಸರ್ಕಾರ ಆದೇಶ ನೀಡಿದ್ದು, ಸ್ಥಳೀಯರು ಅವಕಾಶ ನೀಡಬೇಕೆಂದರು.

ಬೈರಗೊಂಡ್ಲು ಜಲಾಶಯದಿಂದ ಸಾಸಲು ಹೋಬಳಿ 11 ಗ್ರಾಮಗಳು ಕೊರಟಗೆರೆ ವ್ಯಾಪ್ತಿಯ ಹಲವು ಗ್ರಾಮಗಳ ಮುಳುಗಡೆಯಾಗಲಿವೆ. ಮೊದಲನೇ ಹಂತದ ಕಾಮಗಾರಿಯಲ್ಲಿ ರೈತರಿಗೆ ಪರಿಹಾರ ದೊರಕಿದ್ದು, ಎರಡನೇ ಹಂತದಲ್ಲಿ ನೂತನ ಕಾಯ್ದೆ ಅನ್ವಯ ಹೆಚ್ಚುವರಿ ಪರಿಹಾರ ದೊರಕುತ್ತದೆ. ಆ ಕಾರಣ ಈ ಸರ್ವೇ ಅಗತ್ಯವಾಗಿದೆ ಎಂದು ಎತ್ತಿನಹೊಳೆ ವಿಶೇಷ ಭೂ ಸ್ವಾಧೀನಾಧಿಕಾರಿ ಪೂರ್ಣಿಮಾ ತಿಳಿಸಿದರು.

ತಹಸೀಲ್ದಾರ್ ಟಿ.ಎಸ್.ಶಿವರಾಜ್ ಮಾತನಾಡಿ, ಜಲಾಶಯ ನಿರ್ಮಾಣಕ್ಕೆ ಸ್ಥಳೀಯ ಗ್ರಾಮಸ್ಥರ ವಿರೋಧವಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಯಾ ತಾಲೂಕುಗಳಲ್ಲಿ ಚಿಕ್ಕ ಚಿಕ್ಕ ಡ್ಯಾಂ ನಿರ್ಮಿಸಿ ನೀರು ಸಂಗ್ರಹಿಸಿ ಪೂರೈಸಲು ಸರ್ಕಾರದ ಚಿಂತನೆಯಲ್ಲಿದೆ. ಈ ನಿಟ್ಟಿನಲ್ಲಿ ಸರ್ವೆ ಕಾರ್ಯ ನಡೆಸಿ ಜಲಾಶಯ ಅಳತೆ ಕಡಿಮೆ ಮಾಡಲು ಅವಕಾಶ ನೀಡಬೇಕಿದೆ. ಸರ್ವೆ ನಡೆಸುವಾಗ ಅಡ್ಡಿಪಡಿಸುವುದು ಮತ್ತಿತರ ಅಡಚಣೆ ಮಾಡದಂತೆ ಮನವಿ ಮಾಡಿದರು.

ಸಾಧಕ ಬಾಧಕ ತಿಳಿಯಲು ಸರ್ವೇ: ಸಾಸಲು ಹೋಬಳಿಯ ಲಕ್ಕೇನಹಳ್ಳಿ, ಗರಡುಗಲ್ಲು, ಮಚ್ಚೇನಹಳ್ಳಿ, ಶೀರಾಮನಹಳ್ಳಿ, ಶಿಂಗೇನಹಳ್ಳಿ, ಗಾಣದಾಳು, ಕಣಕೇನಹಳ್ಳಿ, ನರಸಾಪುರ, ಆಲಪ್ಪನಹಳ್ಳಿ, ಬೈಯಪ್ಪನಹಳ್ಳಿ ಮತ್ತು ಅಂಕೋನಹಳ್ಳಿ ಗ್ರಾಮಗಳಲ್ಲಿ ಜಲಾಶಯ ಮುಳುಗಡೆಯ ಸಾಧಕ ಬಾಧಕಗಳ ಸರ್ವೇ ಸಮೀಕ್ಷೆ ಕಾರ್ಯ ಮಾಡಲು ಸರ್ಕಾರದಿಂದ ನಿರ್ದೇಶನವಿರುವುದರಿಂದ ಸರ್ವೇ ಕಾರ್ಯ ಮತ್ತು ಜಿಯೋಟೆಕ್ನಿಕಲ್ ತನಿಖೆ ಮಾಡಲು ಸ್ಥಳೀಯರ ಸಹಕಾರ ಅವಶ್ಯವಾಗಿದೆ. ಇದರಿಂದ ಮುಳುಗಡೆ ಪ್ರದೇಶದ ವಿಸ್ತೀರ್ಣ, ಭೂ ಪರಿಹಾರ ಮೊತ್ತ, ಪುನರ್ವಸತಿ ಮತ್ತು ಮರುನಿರ್ಮಾಣದ ಅಂದಾಜು ಲೆಕ್ಕಚಾರ ಮಾಡಲು ಸಹಕಾರಿಯಾಗುತ್ತದೆ ಎಂದು ಉಪವಿಭಾಗಾಕಾರಿ ಅರುಳ್ ಕುಮಾರ್ ತಿಳಿಸಿದರು.