ಸಿದ್ದಾಪುರ : ಇತಿಹಾಸ ಪ್ರಸಿದ್ಧ ಬೈರಂಬಾಡದ ಸುಬ್ರಮಣ್ಯ ದೇವಸ್ಥಾನದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯೊಂದಿಗೆ ಷಷ್ಠಿ ಹಬ್ಬದ ಉತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.
ದೇವಾಲಯದ ಪ್ರಧಾನ ಅರ್ಚಕರ ಸಮ್ಮುಖದಲ್ಲಿ ಪೂಜಾ ಕೈಂಕರ್ಯಗಳೊಂದಿಗೆ ನಡೆಯಿತು. ಮೂರ್ನಾಡು, ನಾಪೊಕ್ಲು, ವಿರಾಜಪೇಟೆ, ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ, ಒಂಟಿಯಂಗಡಿ, ಮರಗೋಡು, ಹಾಕತ್ತೂರು ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ತೀರ್ಥಪ್ರಸಾದ ಸ್ವೀಕರಿಸಿದರು. ಸಾವಿರ ಭಕ್ತರು ತಂಡೋಪತಂಡವಾಗಿ ಬಂದು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ದೇವರಿಗೆ ಮಹಾಮಂಗಳಾರತಿ ಸೇವೆ ನಡೆದ ಬಳಿಕ ಮಧ್ಯಾಹ್ನ ಭಕ್ತರಿಗೆ ದೇವಾಲಯದ ವತಿಯಿಂದ ಅನ್ನಸಂರ್ತಪಣೆ ನಡೆಯಿತು. ದೇವಾಲಯದ ಹೊರಭಾಗದಲ್ಲಿ ಹರಕೆ ಹೊತ್ತ ಭಕ್ತರು ಬೆಳಗ್ಗೆಯಿಂದ ಕೇಶ ಮುಂಡನ ನೆರವೇರಿಸಿದರು. ಸಿದ್ದಾಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಘವೇಂದ್ರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಮುಖ್ಯ ರಸ್ತೆಯ ಬದಿಯಲ್ಲಿ ಕೇರಳದ ಹಲ್ವಾ ಸೇರಿದಂತೆ ಬಗೆಬಗೆಯ ಆಹಾರ ಪದಾರ್ಥಗಳು ತಿಂಡಿ ತಿನಿಸುಗಳ ವ್ಯಾಪಾರ ಜೋರಾಗಿತ್ತು. ನಂತರ ಬೈರಂಬಾಡ ಅಮ್ಮತ್ತಿ ಮಾರ್ಗದ ಕುಲ್ಕುಮಾಡ್ ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಸೌಹಾರ್ದತೆ ಮೆರೆದರು.