ಮಧುಗಿರಿ : ಪಟ್ಟಣ ಹೊರವಲಯದಲ್ಲಿ ಹಾದುಹೋಗಿರುವ ಬೈಪಾಸ್ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಸೀಮೆ ಜಾಲಿ ಗಿಡಗಳಿಂದ ಸಂಚಾರಕ್ಕೆ ತೊಂದರೆ ಉಂಟಾಗಿದ್ದು, ಜೀವಕ್ಕೆ ಕಂಟಕವಾಗಿ ಮಾರ್ಪಟ್ಟಿವೆ. ಪಟ್ಟಣದ ತುಮಕೂರು ರಸ್ತೆಯಲ್ಲಿರುವ ಸಸ್ಯೋದ್ಯಾನದಿಂದ ಬಸವನಹಳ್ಳಿ ಸಮೀಪದ ಕೆಎಸ್‌ಆರ್‌ಟಿಸಿ ಡಿಪೋವರೆಗೂ ಸುಮಾರು 10 ಕಿಮೀ ವ್ಯಾಪ್ತಿಯಲ್ಲಿ ಬೈಪಾಸ್ ರಸ್ತೆಯು ಹಾದುಹೋಗಿದ್ದು, ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ಸೀಮೆ ಜಾಲಿ ಗಿಡಗಳು ಬೆಳೆದು ರಸ್ತೆಯನ್ನು ಆಕ್ರಮಿಸಿಕೊಂಡಿವೆ.
ಈ ಭಾಗದಲ್ಲಿ ಉತ್ತಮ ವಾತಾವರಣವಿರುವ ಹಿನ್ನೆಲೆಯಲ್ಲಿ ಪಟ್ಟಣದ ಬಹುತೇಕ ಜನರು ಬೆಳಗಿನ ಜಾವ ಮತ್ತು ಸಂಜೆಯ ವೇಳೆಯಲ್ಲಿ ವಿಹಾರಕ್ಕೆ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ವಿವಾಹರಕ್ಕೆ ಹೋಗುವವವರು ಮುಳ್ಳಿನ ಗಿಡಗಳು ರಸ್ತೆಗೆ ಚಾಚಿಕೊಂಡಿರುವುದರಿಂದ ಪಕ್ಕಕ್ಕೆ ಬಂದಾಗ ರಸ್ತೆಯಲ್ಲಿ ವೇಗವಾಗಿ ಬರುವ ವಾಹನಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ ಈ ಭಾಗದಲ್ಲಿ ರಾತ್ರಿ ಕಳ್ಳಕಾಕರ ಹಾವಳಿಯಿದ್ದು, ರಾತ್ರಿ ವೇಳೆ ಮುಳ್ಳಿನ ಗಿಡಗಳ ಪಕ್ಕದಲ್ಲಿ ಬಚ್ಚಿಟ್ಟುಕೊಂಡು ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುವ ಸಂದರ್ಭಗಳೂ ಹೆಚ್ಚಾಗಿವೆ.
ಕೊರಟಗೆರೆ ತಾಲೂಕು ದಾಸರಹಳ್ಳಿ ಸಮೀಪ ಟೋಲ್ ಕೇಂದ್ರ ತೆರೆದು ತುಮಕೂರು-ಪಾವಗಡ ಭಾಗದಲ್ಲಿ ಸಂಚರಿಸುವ ವಾಹನ ಸವಾರರಿಂದ ಮುಲಾಜಿಲ್ಲದೇ ಟೋಲ್ ಸಂಗ್ರಹ ಮಾಡುತ್ತಾರೆ. ಆದರೆ ಬೈಪಾಸ್ ರಸ್ತೆಗಳ ನಿರ್ವಹಣೆ ಮಾಡುವುದಿಲ್ಲ ಎಂಬುದು ಸಾರ್ವಜನಿಕರ ಆರೋಪ. ಸಂಬಂಧಪಟ್ಟವರು ಎಚ್ಚೆತ್ತುಕೊಂಡು ತಕ್ಷಣವೇ ಬೈಪಾಸ್ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಮುಳ್ಳಿನ ಗಿಡಗಳನ್ನು ತೆರವು ಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿದೆ.
ಬೈಪಾಸ್ ರಸ್ತೆಯ ಎರಡು ಬದಿಗಳಲ್ಲಿ ಮುಳ್ಳಿನ ಗಿಡಗಳು ಬೆಳೆದು ನಿಂತಿದ್ದು, ಇವುಗಳ ಪಕ್ಕದಲ್ಲಿ ಸಾರ್ವಜನಿಕರು ಹಾದುಹೋಗುವಾಗ ವಾಹನಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಅಪಾಯವಿದೆ. ಅನಾಹುತಗಳು ಸಂಭವಿಸುವ ಮುನ್ನ ಸಂಬಂದಪಟ್ಟವರು ಎಚ್ಚೆತ್ತುಕೊಂಡು ಗಿಡ-ಗಂಟಿಗಳನ್ನು ತೆರವುಗೊಳಿಸಬೇಕು. ನಾಗೇಶ್, ರಾಘವೇಂದ್ರ ಕಾಲನಿ ನಿವಾಸಿ. ಮಧುಗಿರಿ. ಮಧುಗಿರಿ ಹೊರವಲಯದಲ್ಲಿ ಹಾದು ಹೋಗಿರುವ ಬೈಪಾಸ್ ರಸ್ತೆಯು ಕೆಶಿಪ್ ವ್ಯಾಪ್ತಿಗೆ ಬರಲಿದ್ದು, ಸಮಸ್ಯೆಯನ್ನು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಬೈಪಾಸ್ ರಸ್ತೆಯ ಬದಿಯಲ್ಲಿ ಬೆಳೆದಿರುವ ಸೀಮೇಜಾಲಿ ಗಿಡಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗುವುದು. ರಾಜಗೋಪಾಲ್, ಎಇಇ, ಪಿಡಬ್ಲ್ಯುಡಿ, ಮಧುಗಿರಿ