ಗೋಣಿಕೊಪ್ಪ: ಜಿಲ್ಲೆಯ ದೈವಗಳ ಮೂಲ ಸ್ಥಾನ ಬೈತೂರು ವಾರ್ಷಿಕ ಹಬ್ಬ ಗುರುವಾರ ಸಂಪನ್ನಗೊಂಡಿತು.
ಬುಧವಾರ ನಡೆದ ಪನಂದೂಟ್ ಆಚರಣೆಯಲ್ಲಿ ಕೊಡಗಿನ ದೇವರುಗಳಿಗೆ ಬೈತೂರಚ್ಚ ಅನುವಾದ ನೀಡುವ ಮೂಲಕ ಶಕ್ತಿ ನೀಡುವ ಕಾರ್ಯ ನಡೆಯಿತು. ಹಬ್ಬದ ಕೊನೆಯ ದಿನ ಆದಿ ಬೈತೂರಪ್ಪ ಭವನದ ಸಮೀಪವಿರುವ ಸ್ಥಾನದಲ್ಲಿ ಆರಾಟ್ ನಮ್ಮೆ ಆಚರಣೆಯೊಂದಿಗೆ ಹಬ್ಬ ಸಂಪನ್ನಗೊಂಡಿತು.
ಪನಂದೂಟ್ ಆಚರಣೆಯಲ್ಲಿ ಜಿಲ್ಲೆಯ 300 ಕ್ಕೂ ಹೆಚ್ಚು ದೇವರುಗಳು ದರ್ಶನ ನೀಡಿದವು. ತಿರುವಳಕಾರ ಹೊಳೆಯಲ್ಲಿ ಸ್ನಾನ ಮಾಡಿ ಬರುವಾಗ ಅವರ ಮೈಮೇಲೆ ದೇವರು ಬಂದು ಬೈತೂರಚ್ಚನೆದುರು ನಿಂತು ಬೇಡಿಕೊಂಡಿತು. ಉಡುಪು, ಗೆಜ್ಜೆ ತಂಡ್‌ನ ಗಿಜಿ-ಗಿಜಿ ಶಬ್ದ, ಕೂಗಾಟ, ನರ್ತನೆ, ಬೈತೂರಚ್ಚಾ ಎಂದು ಗೌರವ ಪದ ಬಳಕೆ ಭಕ್ತಿಭಾವ ಹೆಚ್ಚಿಸಿತು. ಗುರುಕಾರೊಣ, ಭದ್ರಕಾಳಿ, ಅಯ್ಯಪ್ಪ, ಚಾಮುಂಡಿ, ಲಕ್ಷ್ಮಿ ಸೇರಿದಂತೆ ಸಾಕಷ್ಟು ದೇವರುಗಳು ಶಕ್ತಿ ಪಡೆದುಕೊಂಡವು. ಮಲೆಯಾಳಿ ಭಾಷೆಯಲ್ಲಿ ಅಪ್ಪನಿಗೆ ಗೌರವ ನೀಡುವುದು, ರಾಶಿ ಹಾಕಿರುವ ಬೆತ್ತ, ಗೆಜ್ಜೆತಂಡ್, ಕಡತಲೆಯನ್ನು ಮೈಮೇಲೆ ಬರುವ ದೇವರುಗಳು ಆಯಾ ಅವರಿಗೆ ಸೇರಿದ ಮೂಲವಸ್ತುವನ್ನು ಹೆಕ್ಕಿ ತೆಗೆದು ಬೈತೂರಪ್ಪ ದೇವರ ಎದುರು ಪ್ರಾರ್ಥಿಸಿಕೊಂಡವು. ಸಾವಿರಾರು ಭಕ್ತರು ದೇವರ ಕೃಪೆಗೆ ಪಾತ್ರರಾದರು.
ಆರಾಟ್ ನಮ್ಮೆಯಲ್ಲಿ ದೇವರ ಮೂರ್ತಿ ಹೊತ್ತು ಪರದಕ್ಷಿಣೆ ಹಾಕಲಾಯಿತು. ಈ ಸಂದರ್ಭ ಕೋಮರತಚ್ಚ ಹಬ್ಬದ ಮೂಲ ಮಾಹಿತಿಯನ್ನು ತಿಳಿಸಿತು. ವಯತ್ತೂರ್ ಕಲಿಯಾರ್ ದೇವಸ್ಥಾನ ಸಮಿತಿ ಮುಖ್ಯಸ್ಥ ಒ. ವಿ. ರಾಜನ್, ಟ್ರಸ್ಟಿಗಳಾದ ಹರಿಚಂದ್ರನ್ ನಂಬಿಯಾರ್, ಪುಗ್ಗೇರ ಪಿ. ಪೊನ್ನಪ್ಪ, ಮಾಳೇಟೀರ ರತ್ನ ಸುಬ್ಬಯ್ಯ, ಹರಿದಾಸ್ ಪಳಿಯತ್ ಇದ್ದರು.